Thursday, May 2, 2024
Homeರಾಜ್ಯಮುಸಾಫಿರ್ ಮತ್ತು ಹುಸೇನ್ ಶಬೀದ್ ರಾಮೇಶ್ವರಂ ಕೆಫೆ ಸ್ಪೋಟದ ರೂವಾರಿಗಳು

ಮುಸಾಫಿರ್ ಮತ್ತು ಹುಸೇನ್ ಶಬೀದ್ ರಾಮೇಶ್ವರಂ ಕೆಫೆ ಸ್ಪೋಟದ ರೂವಾರಿಗಳು

ನವದೆಹಲಿ,ಮಾ.23- ಕರ್ನಾಟಕದ ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದ ರೂವಾರಿಗಳು ಮುಸಾಫಿರ್ ಮತ್ತು ಹುಸೇನ್ ಶಬೀದ್ ಎಂಬುದು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ತನಿಖೆಯಿಂದ ದೃಢಪಟ್ಟಿದೆ. ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ನಿವಾಸಿಗಳಾದ ಈ ಇಬ್ಬರು ಶಂಕಿತ ಉಗ್ರರು ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಎನ್‍ಐಎಯ ಹಿಟ್ ಲಿಸ್ಟ್‍ನಲ್ಲಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆಗೆ ನಿರ್ದಿಷ್ಟ ಸಮುದಾಯದ ವಿದ್ಯಾವಂತ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವಕರನ್ನು ಈ ಸಂಘಟನೆಗೆ ಸೆಳೆಯುವುದು ಇವರ ಮುಖ್ಯ ಉದ್ದೇಶವಾಗಿತ್ತು.

ಕಳೆದ ಮಾ.1ರಂದು ಬೆಂಗಳೂರಿನ ಕುಂದಲಹಳ್ಳಿ ಸಮೀಪ ಇರುವ ರಾಮೇಶ್ವರ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದ ಹಿಂದೆ ಈ ಇಬ್ಬರ ಕೈವಾಡ ಇರುವುದನ್ನು ಎನ್‍ಐಎ ಪತ್ತೆಹಚ್ಚಿದೆ. ಈ ಹಿಂದೆ ಶಿವಮೊಗ್ಗದ ತುಂಗಾಭದ್ರ ನದಿ ಬಳಿ ಸಂಭವಿಸಿದ ಬಾಂಬ್ ಸ್ಪೋಟ ಹಾಗೂ ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟದಲ್ಲೂ ಇವರದೇ ಕೈವಾಡ ಇತ್ತು ಎಂದು ಎನ್‍ಐಎ ಮೂಲಗಳು ತಿಳಿಸಿವೆ.

ಸುಳಿವು ನೀಡಿದ ಕೂದಲು:
ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟಿಸುವ ಮುನ್ನ ಶಂಕಿತ ಉಗ್ರ ಮುಸಾಫಿರ್ ಚೆನ್ನೈನ ಮಾಲ್‍ವೊಂದರಲ್ಲಿ ಟೋಪಿಯನ್ನು ಖರೀದಿಸಿದ್ದ. ಅಂದುಕೊಂಡಂತೆ ಹೊಸೂರು ಮೂಲಕ ಕರ್ನಾಟಕ ಪ್ರವೇಶಿಸಿ ಮಾ.1ರಂದು ತನ್ನ ಗುರಿ ಸಾಧಿಸಲು ಕಾರ್ಯತಂತ್ರ ರೂಪಿಸಿದ್ದ. ಅದರಂತೆ ಮಾ.1ರಂದು ಕುಂದಹಳ್ಳಿ ಸಮೀಪ ಇರುವ ರಾಮೇಶ್ವರ ಕೆಫೆಗೆ ತಿಂಡಿ ತಿನ್ನುವ ಸೋಗಿನಲ್ಲಿ ಹೋಗಿ ಬಾಂಬ್ ಇಟ್ಟು ಪರಾರಿಯಾಗಿದ್ದ. ಯಾರಿಗೂ ಕೂಡ ಗೊತ್ತಾಗದಂತೆ ಮುಖಕ್ಕೆ ಕ್ಯಾಪ್ ಧರಿಸಿರುವುದು ಸಿಸಿಟಿವಿಯಲ್ಲಿ ಬಯಲಾಗಿತ್ತು.

ತನ್ನ ಕಾರ್ಯ ಮುಗಿಯುತ್ತಿದ್ದಂತೆ ಮುಸಾಫಿರ್ ನಗರದ ಮಸೀದಿಯೊಂದಕ್ಕೆ ತೆರಳಿ ನಮಾಜ್ ಸಲ್ಲಿಸಿ ತಾನು ಧರಿಸಿದ್ದ ಟೋಪಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಎಂದು ಆತನ ಸವಾಲು ಹಾಕಿದ್ದಾನೆ. ಮಸೀದಿ ಬಳಿ ಇದ್ದ ಟೋಪಿಯನ್ನು ಎನ್‍ಐಎ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಎಫ್‍ಎಸ್‍ಎಲ್‍ಗೆ ಕಳುಹಿಸಿಕೊಟ್ಟಿತ್ತು. ಅದರಲ್ಲಿ ಸಂಗ್ರಹವಾಗಿದ್ದ ಒಂದು ಸಣ್ಣ ಕೂದಲಿನಿಂದ ಬಾಂಬ್ ಸ್ಪೋಟದ ರೂವಾರಿ ಈತನೇ ಎಂಬುದು ದೃಢಪಟ್ಟಿದೆ.

ಕೆಲ ದಿನಗಳ ಹಿಂದೆ ಎನ್‍ಐಎ ಅಧಿಕಾರಿಗಳು ತಮಿಳುನಾಡಿನ ಏಳು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಚೆನ್ನೈನ ಮಣ್ಣಾಡಿಯ ಮುತ್ಯಾಲಪೇಟೆ, ರಾಮನಾಥಪುರಂ, ಕೀಲಕ್ಕರೈ ಇತ್ಯಾದಿ ಕಡೆ ದಾಳಿ ನಡೆಸಿತ್ತು. ಈ ವೇಳೆ ಕೆಲವು ಸಂಶಯಾಸ್ಪದ ವಸ್ತುಗಳನ್ನು ವಶಪಡಿಸಿಕೊಂಡಾಗ ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಪೋಟಕ್ಕೂ ಮುನ್ನ ಶಂಕಿತ ಉಗ್ರರಾದ ಮುಸಾಫಿರ್ ಮತ್ತು ಹುಸೇನ್ ಶಬೀದ್ ಎರಡು ತಿಂಗಳು ಬಾಡಿಗೆ ಮನೆ ಪಡೆದುಕೊಂಡು ವಾಸ ಮಾಡಿದ್ದರು. ದೇಶದ ವಿವಿಧೆಡೆ ಸಂಭವಿಸಿದ ಬಾಂಬ್ ಸ್ಪೋಟ ಮತ್ತು ವಿಧ್ವಂಸಕ ಕೃತ್ಯದಲ್ಲಿ ಈ ಇಬ್ಬರು ಶಾಮೀಲಾಗಿರುವುದು ಎನ್‍ಐಎನಿಂದ ಸಾಬೀತಾಗಿದೆ.

2019ರಿಂದ ಈವರೆಗೂ ಇಬ್ಬರೂ ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆಗೆ ಯುವಕರನ್ನು ಸೆಳೆಯಲು ಗುಪ್ತ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಎನ್‍ಐಎ ಶಂಕಿಸಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿ ಪರಾರಿಯಾಗಿರುವ ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‍ಐಎ ಘೋಷಣೆ ಮಾಡಿದೆ.ಅಲ್ಲದೆ ಮಾಹಿತಿ ನೀಡಿದವರ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎನ್‍ಐಎ ಹೇಳಿದೆ. ಇದೀಗ ತಲೆಮರೆಸಿಕೊಂಡಿರುವ ಈ ಇಬ್ಬರ ಹೆಡೆಮುರಿ ಕಟ್ಟಲು ತಮಿಳುನಾಡು, ಕರ್ನಾಟಕದಲ್ಲಿ ಶೋಧ ಕಾರ್ಯ ಮುಂದುವರೆದಿದೆ.

RELATED ARTICLES

Latest News