ಮೈಸೂರು, ಸೆ.28- ಕೆಂಪು ಮತ್ತು ಬಿಳಿ ಬಣ್ಣದ ಚಿತ್ತಾರದ ಜೊತೆಗೆ ಬೆಂಕಿಯ ಉಂಡೆಗಳನ್ನು ಉಗುಳುತ್ತಾ ನಾ ಮುಂದೆ, ನೀ ನನ್ನ ಹಿಂದೆ ಎಂಬಂತೆ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಂಡ ಜನ ದಿಗೂಢರಾದರು.
ವೈಮಾನಿಕ ಹಾರಾಟದ ಮೂಲಕ ಸಾರಂಗ್ ತನ್ನ ಯಶಸ್ಸು ಮತ್ತು ಧೈರ್ಯವನ್ನು ಪ್ರದರ್ಶಿಸುತ್ತಿದ್ದರೆ, ಇತ್ತ ಮೈಸೂರಿನ ಜನತೆ ಶಿಳ್ಳೆ, ಚಪ್ಪಾಳೆ ಚೀತ್ಕಾರದೊಂದಿಗೆ ಬೆರಗಿನಿಂದ ವೀಕ್ಷಿಸಿದರು.
ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆ ಸಾರಂಗ ತಂಡದಿಂದ ನಡೆದ ವೈಮಾನಿಕ ಪ್ರದರ್ಶನದಲ್ಲಿ ನವಿಲಿನ ಚಿತ್ತಾರವಿರುವ ಲೋಹದ ಹಕ್ಕಿಗಳ ಚಮತ್ಕಾರಿ ಪ್ರದರ್ಶನಕ್ಕೆ ಮಾರುಹೋದರು.
ಸುಮಾರು 22 ರಿಂದ 25 ನಿಮಿಷಗಳ ಕಾಲ ಶರವೇಗದಲ್ಲಿ ನಡೆದ ವೈಮಾನಿಕ ಹಾರಾಟದಲ್ಲಿ ಡಾಲ್ಫೀನ್ ಸ್ಲೀಪ್, ಸಾರಂಗ್ ಸ್ಪ್ಲೀಟ್, ಹಾರ್ಟ್ ಫಾರ್ಮೇಷನ್, ಡಿವೈನ್ ಗ್ಲಾಸ್, ಡಬಲ್ ಏರೋ ಕ್ರಾಸ್ ಸೇರಿದಂತೆ ಒಟ್ಟು 16 ರೀತಿಯ ಮಾದರಿಗಳನ್ನು ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.
ಇದಕ್ಕಾಗಿ ಒಟ್ಟು 70 ಸಿಬ್ಬಂದಿಗಳು ಶ್ರಮಿಸಿದ್ದು, ಐದು ಸಾರಂಗಗಳು ಅತ್ಯದ್ಭುತವಾದ ಪ್ರದರ್ಶನ ನೀಡುವ ಮೂಲಕ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿಯ ಮನಸ್ಸನ್ನು ಸೂರೆಗೊಂಡರು.