Saturday, July 27, 2024
Homeಜಿಲ್ಲಾ ಸುದ್ದಿಗಳುಮಲಗಿದಲ್ಲೇ ಮರಣವನ್ನಪ್ಪಿದ ಒಂದೇ ಕುಟುಂಬದ ನಾಲ್ವರು, ಸಿಲಿಂಡರ್‌ ಸೋರಿಕೆ ಶಂಕೆ

ಮಲಗಿದಲ್ಲೇ ಮರಣವನ್ನಪ್ಪಿದ ಒಂದೇ ಕುಟುಂಬದ ನಾಲ್ವರು, ಸಿಲಿಂಡರ್‌ ಸೋರಿಕೆ ಶಂಕೆ

ಮೈಸೂರು, ಮೇ 22- ಮನೆಯೊಂದರಲ್ಲಿ ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆಲನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯರಗನಹಳ್ಳಿಯ ಕಾವೇರಿ ಆಸ್ಪತ್ರೆ ಸಮೀಪದ ನಿವಾಸಿ, ಬಟ್ಟೆ ಐರನ್‌ ಕೆಲಸ ಮಾಡುತ್ತಿದ್ದ ಕುಮಾರಸ್ವಾಮಿ(45) ಇವರ ಪತ್ನಿ ಮಂಗಳ(39) ಮತ್ತು ಮಕ್ಕಳಾದ ಅರ್ಚನಾ(19), ಸ್ವಾತಿ(17) ಮೃತಪಟ್ಟವರು.

ಈ ಕುಟುಂಬದವರು ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ಕುಟುಂಬದವರೆಲ್ಲರೂ ಊಟ ಮಾಡಿ ನಿದ್ರೆಗೆ ಜಾರಿದ್ದಾರೆ. ಆ ಸಂದರ್ಭದಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿರುವುದು ಇವರ ಗಮನಕ್ಕೆ ಬಂದಿಲ್ಲ. ಬೆಳಗಾಗುವಷ್ಟರಲ್ಲಿ ನಾಲ್ಕು ಜನ ಮಲಗಿದ್ದ ಜಾಗದಲ್ಲೇ ಶವವಾಗಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಖರಾಯಪಟ್ಟಣದವರಾದ ಈ ಕುಟುಂಬ 30 ವರ್ಷಗಳ ಹಿಂದೆ ಮೈಸೂರಿಗೆ ಬಂದು ನೆಲೆಸಿತ್ತು. ಸಿದ್ದಾರ್ಥ ಲೇಔಟ್‌ನ ಜೆಎಸ್‌‍ಎಸ್‌‍ ಪಬ್ಲಿಕ್‌ ಶಾಲೆ ಬಳಿ ಕುಮಾರಸ್ವಾಮಿ ಅವರು ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದು, ಐರನ್‌ಗೆ ಗ್ಯಾಸ್‌‍ ಸಿಲಿಂಡರ್‌ ಬಳಸುತ್ತಿದ್ದರು. ಹಾಗಾಗಿ ಇವರ ಮನೆಯಲ್ಲಿ ಮೂರು ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟಿದ್ದರು.

ಭಾನುವಾರ ಸಂಬಂಧಿಕರ ಮದುವೆಗೆಂದು ಕಡೂರಿಗೆ ಹೋಗಿದ್ದ ಈ ಕುಟುಂಬ ಸೋಮವಾರ ವಾಪಸ್‌‍ ಬಂದು ರಾತ್ರಿ ಮಲಗಿದ್ದು, ಬೆಳಗಾಗುವಷ್ಟರಲ್ಲಿ ಮಲಗಿದ್ದಲ್ಲಿಯೇ ನಾಲ್ಕೂ ಜನ ಸಾವನ್ನಪಿದ್ದಾರೆ. ಆದರೆ ಇದು ಯಾರ ಗಮನಕ್ಕೂ ಬಂದಿಲ್ಲ.

ಎರಡು ದಿನಗಳಿಂದ ಅರ್ಚಅನಾ ಕಾಲೇಜಿಗೆ ಬಾರದಿದ್ದಾಗ ಆಕೆಯ ಸ್ನೇಹಿತರು ಇಂದು ಬೆಳಗ್ಗೆ ಮನೆ ಬಳಿ ಹೋಗಿದ್ದಾರೆ. ಬಾಗಿಲು ಬಡಿದರೂ ತೆಗೆಯದಿದ್ದಾಗ ಕಿಟಕಿ ತಳ್ಳಿ ನೋಡಿದ್ದು, ಹಾಲ್‌ನಲ್ಲಿ ಮಕ್ಕಳಿಬ್ಬರು ಒಂದೊಂದು ಕಡೆ ಮಲಗಿರುವುದು ಕಂಡು ಕೂಗಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ನೆರೆಹೊರೆಯವರನ್ನು ಕರೆದು ವಿಷಯ ತಿಳಿಸಿ ನಂತರ ಪೊಲೀಸರಿಗೆ ಹೇಳಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ನಾಲ್ವರೂ ಮೃತಪಟ್ಟಿರುವುದು ಕಂಡುಬಂದಿದೆ. ಮನೆಯೊಳಗೆ ಗ್ಯಾಸ್‌‍ ವಾಸನೆ ಬರುತ್ತಿರುವುದು ಗಮನಿಸಿ ತಕ್ಷಣ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮೂರು ಸಿಲಿಂಡರ್‌ಗಳನ್ನು ಹೊರಗೆ ತಂದಿಟ್ಟಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಎಫ್‌ಎಸ್‌‍ಎಲ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್‌‍ ಆಯುಕ್ತ ರಮೇಶ್‌ ಬಾನೋತ್‌ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಈ ನಾಲ್ವರ ಸಾವು ಹೇಗಾಯಿತು ಎಂಬುವುದು ನಿಖರವಾಗಿ ಗೊತ್ತಾಗಲಿದೆ.

RELATED ARTICLES

Latest News