Homeರಾಷ್ಟ್ರೀಯಯಮನಾಗಿ ಬಂದು 15 ಶೀತಲಾ ಮಾತಾ ಭಕ್ತರ ಬಲಿಪಡೆದ ಲಾರಿ : ಮಧ್ಯಪ್ರದೇಶದಳ್ಳಿ ಘೋರ ದುರಂತ

ಯಮನಾಗಿ ಬಂದು 15 ಶೀತಲಾ ಮಾತಾ ಭಕ್ತರ ಬಲಿಪಡೆದ ಲಾರಿ : ಮಧ್ಯಪ್ರದೇಶದಳ್ಳಿ ಘೋರ ದುರಂತ

ಗ್ವಾಲಿಯರ್‌,ಅ.18- ಭತ್ತ ತುಂಬಿದ್ದ ಲಾರಿಯೊಂದು ಪೊಲೀಸ್‌‍ ಬ್ಯಾರಿಕೇಡ್‌ಗಳನ್ನು ಮುರಿದು ಶೀತಲಾ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ಪರಿಣಾಮ ಕನಿಷ್ಠ ಪಕ್ಷ 15 ಮಂದಿ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‌ ಬಳಿ ಇರುವ ಛಿನೋರ್‌ ರಸ್ತೆಯಲ್ಲಿ ಇಂದು ಮುಂಜಾನೆ ಸುಮಾರು 1.30ರ ವೇಳೆಗೆ ಈ ಅಪಘಾತ ಸಂಭವಿಸಿದೆ.

ಇಳಿಜಾರು ಹೆಚ್ಚಿರುವ ಕಾರಣ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಲಭ್ಯವಾದ ಮಾಹಿತಿಯ ಪ್ರಕಾರ, ರಸ್ತೆಯಲ್ಲಿ ತಡೆದು ನಿಲ್ಲಿಸಲಾಗಿದ್ದ ಲಾರಿ ಏಕಾಏಕಿ ಪೊಲೀಸ್‌‍ ಬ್ಯಾರಿಕೇಡ್‌ಗಳನ್ನು ಮುರಿದು ಮುಂದೆ ಸಾಗಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ಇಳಿಜಾರಿನಲ್ಲಿ ವೇಗವಾಗಿ ಕೆಳಕ್ಕೆ ಇಳಿದು, ದೇವಸ್ಥಾನದ ಹೊರಗೋಡೆ ಮತ್ತು ಪ್ರವೇಶ ದ್ವಾರಕ್ಕೆ ಡಿಕ್ಕಿ ಹೊಡೆದಿದೆ.

ಚ ಈ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಕ್ತರು ಲಾರಿಯ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.ಘಟನೆಯ ಬಳಿಕ ಒಟ್ಟು 39 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಐದರಿಂದ ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಮೂಳೆ ಮುರಿತದ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್‌‍ ಸಿಬ್ಬಂದಿಗೂ ಗಾಯಗಳಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶೀತಲಾ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಛಿನೋರ್‌ ಕಡೆಯಿಂದ ದೇವಸ್ಥಾನಕ್ಕೆ ಬರುವ ರಸ್ತೆಯಲ್ಲಿ ತೀವ್ರ ಇಳಿಜಾರಿದೆ. ಹೀಗಾಗಿ ಅಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇಂದು ಮುಂಜಾನೆ ಸುಮಾರು 1.30ಕ್ಕೆ ಭತ್ತ ತುಂಬಿದ್ದ ಲಾರಿಯನ್ನು ಅಲ್ಲಿ ತಡೆದು ನಿಲ್ಲಿಸಲಾಗಿತ್ತು. ಆದರೆ, ಅದು ಪೊಲೀಸ್‌‍ ಬ್ಯಾರಿಕೇಡ್‌ಗಳನ್ನು ಮುರಿದು ಏಕಾಏಕಿ ನಿಯಂತ್ರಣ ಕಳೆದುಕೊಂಡು ಇಳಿಜಾರಿನಲ್ಲಿ ಕೆಳಕ್ಕೆ ಬಂದು ದೇವಸ್ಥಾನದ ಹೊರಗೋಡೆ ಮತ್ತು ಪ್ರವೇಶ ದ್ವಾರಕ್ಕೆ ಡಿಕ್ಕಿ ಹೊಡೆದಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿ ಧರ್ಮವೀರ್‌ ಸಿಂಗ್‌ ತಿಳಿಸಿದ್ದಾರೆ.

ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಭಕ್ತರು ಲಾರಿಯ ಅಡಿಯಲ್ಲಿ ಸಿಲುಕಿದ್ದರಿಂದ ಹಲವು ಸಾವು-ನೋವುಗಳು ಸಂಭವಿಸಿವೆ. ಗಾಯಾಳುಗಳು ಹಾಗೂ ಗಾಯಗೊಂಡ ಇಬ್ಬರು ಪೊಲೀಸ್‌‍ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಗ್ವಾಲಿಯರ್‌ ಜಿಲ್ಲಾಧಿಕಾರಿ ರುಚಿಕಾ ಚೌಹಾಣ್‌ ಅವರು ಅಪಘಾತದ ಮಾಹಿತಿ ಲಭಿಸಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ತಿಳಿಸಿದ್ದಾರೆ.

ನವರಾತ್ರಿ ಹಿನ್ನೆಲೆಯಲ್ಲಿ ಆ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸ್‌‍ ತಪಾಸಣಾ ಕೇಂದ್ರ ಸ್ಥಾಪಿಸಲಾಗಿತ್ತು. ಹೀಗಿದ್ದರೂ ಲಾರಿ ನಿರ್ಬಂಧಿತ ರಸ್ತೆಯನ್ನು ಪ್ರವೇಶಿಸಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಪಘಾತವನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬರು, ಲಾರಿ ಏಕಾಏಕಿ ಜನರು ಮತ್ತು ಅಂಗಡಿಗಳ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿ ಭೀಕರ ಗೊಂದಲ ಉಂಟಾಯಿತು ಎಂದು ತಿಳಿಸಿದ್ದಾರೆ.

ಪೊಲೀಸ್‌‍ ಬ್ಯಾರಿಕೇಡ್‌ಗಳನ್ನು ಮುರಿದು ಲಾರಿ ನಿರ್ಬಂಧಿತ ರಸ್ತೆಗೆ ಪ್ರವೇಶಿಸಿದ್ದು ಹೇಗೆ, ಚಾಲಕನ ನಿಯಂತ್ರಣ ತಪ್ಪಲು ಕಾರಣವೇನು ಹಾಗೂ ಅಪಘಾತಕ್ಕೆ ಕಾರಣವಾದ ಇತರ ಅಂಶಗಳೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಅಪಘಾತದಲ್ಲಿ ಜೀವಹಾನಿಯಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50,000 ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

RELATED ARTICLES
spot_img

Latest News