ನವದೆಹಲಿ,ಜೂನ್ 2- ಕೇಂದ್ರ ಗೃಹ ಸಚಿವಾಲಯವು ವಲಸೆ ಮತ್ತು ವಿದೇಶಿಯರ ನಿಯಮಗಳು-2025ಗೆ ತಿದ್ದುಪಡಿ ಮಾಡಿ ಹೊಸ ನಿಯಮಗಳ ಅಧಿಸೂಚನೆ ಹೊರಡಿಸಿದೆ.
ಇದರಡಿ ಭಾರತಕ್ಕೆ ಬರುವ ವಿದೇಶಿಯರ ನೋಂದಣಿ ಪ್ರಕ್ರಿಯೆ ಹಾಗೂ ಕೆಲವು ಆಡಳಿತಾತ್ಮಕ ಕ್ರಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
180 ದಿನಗಳೊಳಗೆ ನೋಂದಣಿ ಕಡ್ಡಾಯ:
ಹೊಸ ನಿಯಮದ ಪ್ರಕಾರ, 180 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ವೀಸಾದೊಂದಿಗೆ ಭಾರತಕ್ಕೆ ಬಂದಿರುವ ವಿದೇಶಿಯರು ತಮ ವೀಸಾ ಅವಧಿಗಿಂತ ಹೆಚ್ಚು ಕಾಲ ಭಾರತದಲ್ಲಿ ಉಳಿಯಲು ಬಯಸಿದರೆ, 180 ದಿನಗಳ ಅವಧಿ ಮುಗಿಯುವ ಮೊದಲು ಯಾವುದೇ ಸಮಯದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು
ಈ ಹಿಂದೆ, ಭಾರತಕ್ಕೆ ಬಂದ 180 ದಿನಗಳ ಅವಧಿ ಪೂರ್ಣಗೊಂಡ ಬಳಿಕ 14 ದಿನಗಳೊಳಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿತ್ತು. ಇದೀಗ ಆ ನಿಯಮವನ್ನು ಬದಲಿಸಲಾಗಿದೆ.
ದೀರ್ಘಾವಧಿ ವೀಸಾ ಹೊಂದಿದವರಿಗೂ ಹೊಸ ನಿಯಮ :
180 ದಿನಗಳಿಗಿಂತ ಹೆಚ್ಚಿನ ಅವಧಿಯ ವೀಸಾ ಹೊಂದಿದ್ದರೂ, ಒಂದು ಬಾರಿ ವಾಸ್ತವ್ಯ 180 ದಿನ ಮೀರಬಾರದು ಎಂಬ ಷರತ್ತು ಇರುವ ವಿದೇಶಿಯರು ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸಿದರೆ, ಅವರು ಸಹ 180 ದಿನಗಳ ಅವಧಿ ಮುಗಿಯುವ ಮೊದಲೇ ನೋಂದಣಿ ಮಾಡಿಸಬೇಕು.
ಇಂತಹ ನೋಂದಣಿಯನ್ನು ಇನ್ನು ಮುಂದೆ ತುರ್ತು ಅಥವಾ ವಿಶೇಷ ಸಂದರ್ಭಗಳಲ್ಲಿ ಮಾತ ಅನುಮತಿಸಲಾಗುವುದು ಎಂದು ಹೊಸ ನಿಯಮ ಸ್ಪಷ್ಟಪಡಿಸಿದೆ. ವಿದೇಶಿ ಪೋಷಕರ ಮಕ್ಕಳಿಗೆ ವಿನಾಯಿತಿ:ಹಿಂದಿನ ನಿಯಮಗಳ ಪ್ರಕಾರ, ಭಾರತದಲ್ಲಿ ವಿದೇಶಿ ಪೋಷಕರಿಗೆ ಮಗು ಜನಿಸಿದರೆ, ಹೊಸ ವೀಸಾ ಅಥವಾ ನಿರ್ಗಮನ ಅನುಮತಿ ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು 30 ದಿನಗಳೊಳಗೆ ನೋಂದಣಿ ಅಧಿಕಾರಿಗೆ ಆನ್ಲೈನ್ ಮೂಲಕ ಮಾಹಿತಿ ನೀಡಬೇಕಾಗಿತ್ತು. ಆದರೆ ಈಗ, ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕರಾಗಿದ್ದು, ಮಗುವಿನ ಭಾರತೀಯ ಪೌರತ್ವವನ್ನು ಉಳಿಸಿಕೊಳ್ಳಲು ಬಯಸಿದರೆ ಈ ನಿಯಮ ಅನ್ವಯಿಸುವುದಿಲ್ಲ.
