ಜಬಲ್ಪುರ, ಅ. 17 (ಪಿಟಿಐ): ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಕ್ಟೋಬರ್ 24ರಿಂದ ಮಧ್ಯಪ್ರದೇಶದ ಜಬಲ್ಪುರಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಕಾಲೇಜು ವಿದ್ಯಾರ್ಥಿಗಳಾಗಿರುವ ಸ್ವಯಂಸೇವಕರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಪ್ರದೇಶದಲ್ಲಿ ಯುವಜನರನ್ನು ತಲುಪುವ ಪ್ರಯತ್ನವನ್ನು ಸಂಘವು ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಆರ್ಎಸ್ಎಸ್ ಪ್ರಾಂತ ಪ್ರಚಾರ ಪ್ರಮುಖ್ ವಿನೋದ್ ಕುಮಾರ್ ಅವರು ಪಿಟಿಐಗೆ ತಿಳಿಸಿದಂತೆ, ಅಕ್ಟೋಬರ್ 25ರಂದು ಮಹಾಕೌಶಲ ಪ್ರಾಂತದ ಜೆನ್-ಝೀ (ಇಂದಿನ ಯುವ ಪೀಳಿಗೆ) ಸ್ವಯಂಸೇವಕರಿಗಾಗಿ ಆಯೋಜಿಸಲಾದ ಶಿಬಿರವನ್ನು ಉದ್ದೇಶಿಸಿ ಭಾಗವತ್ ಮಾತನಾಡಲಿದ್ದಾರೆ.
ಇದಲ್ಲದೆ, ಅವರು ಸ್ಥಳೀಯ ಪದಾಧಿಕಾರಿಗಳು ಮತ್ತು ಪ್ರಾಂತೀಯ ಕಾರ್ಯಕಾರಿ ತಂಡಗಳೊಂದಿಗೆ ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ. ಆರ್ಎಸ್ಎಸ್ನ ಮಧ್ಯ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹಾಕೌಶಲ ಪ್ರಾಂತವು 38 ಕಂದಾಯ ಜಿಲ್ಲೆಗಳನ್ನು ಒಳಗೊಂಡಿದ್ದು, ಜಬಲ್ಪುರ, ಸಾಗರ್ ಮತ್ತು ರೇವಾಗಳಲ್ಲಿ ಇದರ ವಿಭಾಗೀಯ ಕೇಂದ್ರ ಕಚೇರಿಗಳಿವೆ.
ಭೇಟಿಯ ಮೊದಲ ದಿನವಾದ ಅಕ್ಟೋಬರ್ 24ರಂದು ಆರ್ಎಸ್ಎಸ್ ಮುಖ್ಯಸ್ಥರು ಸ್ಥಳೀಯ ಪ್ರಮುಖ ನಾಯಕರು, ಮುಖ್ಯ ಶಿಕ್ಷಕರು (ತರಬೇತುದಾರರು) ಮತ್ತು ನಗರ ಮಟ್ಟದ ಹಿರಿಯ ಪದಾಧಿಕಾರಿಗಳನ್ನು ಭೇಟಿಯಾಗಿ ಸಂಘಟನೆಯ ಆಂತರಿಕ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.
ಅಕ್ಟೋಬರ್ 26ರಂದು ಮಹಾಕೌಶಲ ಪ್ರಾಂತದ ಕಾರ್ಯಕಾರಿ ಸಮಿತಿ ಮತ್ತು ವಿಭಾಗೀಯ ತಂಡಗಳ ಸದಸ್ಯರೊಂದಿಗೆ ಸಭೆ ನಡೆಸುವ ಮೂಲಕ ಅವರ ಭೇಟಿ ಮುಕ್ತಾಯಗೊಳ್ಳಲಿದೆ. ಈ ಸಭೆಯಲ್ಲಿ ಸಂಘಟನಾತ್ಮಕ ಕಾರ್ಯಗಳು, ಚಟುವಟಿಕೆಗಳು ಮತ್ತು ಸಮಕಾಲೀನ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ವಿನೋದ್ ಕುಮಾರ್ ತಿಳಿಸಿದರು.
ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ವಿವಿಧ ಪ್ರತಿಭಟನೆಗಳು ಮತ್ತು ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಆರ್ಎಸ್ಎಸ್ ಈಗ ಜೆನ್-ಝೀ (ಸುಮಾರು 1997ರಿಂದ 2012ರ ನಡುವೆ ಜನಿಸಿದವರು) ಮತ್ತು ಜೆನ್-ಆಲ್ಫಾ (2013ರಿಂದ 2025ರ ನಡುವೆ ಜನಿಸಿದವರು) ಪೀಳಿಗೆಯ ಯುವಜನರನ್ನು ತಲುಪುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ.
