ಡಿಯೋರಿಯಾ, ಫೆ. 4: ಎಂಟನೇ ತರಗತಿ ವಿದ್ಯಾರ್ಥಿನಿ ಮೇಲೆ ಆಕೆಯ ಸಹಪಾಠಿಗಳೇ ಸಾಮೂಹಿಕ ಅತ್ಯಾಚಾರವೆಸಗಿರುವ ಹಿನ್ನೆಲೆಯಲ್ಲಿ ಅಪ್ರಾಪ್ತೆ ಗರ್ಭಿಣಿಯಾಗಿರುವ ಘಟನೆ ಡಿಯೋರಿಯಾದಲ್ಲಿ ನಡೆದಿದೆ.
ಸಹಪಾಠಿಗಳು ಅಪ್ರಾಪ್ತೆಗೆ ಮಾದಕದ್ರವ್ಯ ಕೊಟ್ಟು ಅತ್ಯಾಚಾರವೆಸಗಿದ್ದಾರೆ ಹೀಗಾಗಿ ಆಕೆ ಗರ್ಭಿಣಿಯಾಗಿದ್ದು, ಇದೀಗ ಈ ಕೃತ್ಯ ಬೆಳಕಿಗೆ ಬಂದಿದೆ. ಕಳೆದ ನವೆಂಬರ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾಮುಕ ಸಹಪಾಠಿಗಳು ಪ್ರಸಾದದ ನೆಪದಲ್ಲಿ ಆಕೆಗೆ ಮತ್ತು ಬರುವ ಔಷಧಿ ನೀಡಿ ನಂತರ ಸಮೀಪದ ಮನೆಗೆ ಕರೆದುಕೊಂಡು ಮೂವರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.
ನಿನ್ನ ಮೇಲೆ ಮಾಡಿರುವ ಅತ್ಯಾಚಾರದ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡಿದ್ದೇವೆ ವಿಷಯ ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿ ಆಕೆಯನ್ನು ಸಾಗ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಭಯಭೀತರಾದ ವಿದ್ಯಾರ್ಥಿನಿ ಎರಡು ತಿಂಗಳ ಕಾಲ ಇದನ್ನು ರಹಸ್ಯವಾಗಿಟ್ಟಳು. ಹುಡುಗಿ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು, ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿದೆ.
ಆಕೆಯ ಪೋಷಕರು ಅವಳನ್ನು ಅಲ್ಟ್ರಾಸೌಂಡ್ ಸ್ಕ್ಯಾನ್‌ಗೆ ಕರೆದೊಯ್ದರು, ಮತ್ತು ಫಲಿತಾಂಶಗಳು ಅವರನ್ನು ದಿಗ್ಭ್ರಮೆಗೊಳಿಸಿತ್ತು. ಅಪ್ರಾಪ್ತ ವಯಸ್ಕಳು ಎರಡು ತಿಂಗಳ ಗರ್ಭಿಣಿಯಾಗಿದ್ದಳು. ಬಳಿಕ ಆಕೆ ನಡೆದಿದ್ದೆಲ್ಲವನ್ನು ಪೋಷಕರಿಗೆ ವಿವರಿಸಿದ್ದಾಳೆ.ಸಂತ್ರಸ್ತೆಯ ತಾಯಿಯ ಔಪಚಾರಿಕ ದೂರಿನ ಮೇರೆಗೆ, ಲಾರ್ ಪೊಲೀಸರು ಜನವರಿ 31 ರಂದು ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸಂತೋಷ್ ಕುಮಾರ್ ದೃಢಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಕಠಿಣ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
