ನವದೆಹಲಿ, ಫೆ. 10 (ಪಿಟಿಐ): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿಗೆ ಜಾರಿ ನಿರ್ದೇಶನಾಲಯ (ಇಡಿ) ಶೀಘ್ರದಲ್ಲೇ ಹೊಸ ಸಮನ್ಸ್ ಜಾರಿ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ನಟಿ ಟೀನಾ (68) ಅವರನ್ನು ಫೆಡರಲ್ ಸಂಸ್ಥೆಯು ಹೇಳಿಕೆ ನೀಡಲು ಕೇಳಿಕೊಂಡಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಶೀಘ್ರದಲ್ಲೇ ಅವರನ್ನು ಮತ್ತೆ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಯಾರ್ಕ್ನ ಮ್ಯಾನ್ಹ್ಯಾಟನ್ನಲ್ಲಿ ಐಷಾರಾಮಿ ಕಾಂಡೊಮಿನಿಯಂ ಖರೀದಿಗೆ ಸಂಬಂಧಿಸಿದ ಹಣದ ಹಾದಿ ಕುರಿತು ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಇಡಿ ಇತ್ತೀಚೆಗೆ ಮಾಜಿ ಆರ್ಕಾಮ್ (ರಿಲಯನ್ಸ್ ಕಮ್ಯುನಿಕೇಷನ್ಸ್) ಅಧ್ಯಕ್ಷ ಪುನೀತ್ ಗಾರ್ಗ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ಎಡಿಎಜಿ) ವಿರುದ್ಧದ ಬ್ಯಾಂಕ್ ವಂಚನೆ ಹಾಗೂ ಸಂಬಂಧಿತ ಹಣಕಾಸು ಅಕ್ರಮಗಳ ಹಲವು ಪ್ರಕರಣಗಳ ತನಿಖೆಗೆ ಇತ್ತೀಚೆಗೆ ಸಂಸ್ಥೆ ಎಸ್ಐಟಿಯನ್ನು ರಚಿಸಿದೆ.
