ಲಂಡನ್, ಜು.22- ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ಮುಂದುವರೆದಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳಲ್ಲಿ ಭಾರಿ ಜಿಗಿತ ಕಂಡು ಬಂದಿದೆ.ಅಂತರರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲ ಬೆಲೆಯು 1.2% ಕ್ಕೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್ಗೆ 92.09 ಡಾಲರ್ಗೆ(8,800 ರೂ.) ತಲುಪಿದೆ. ಇದು ಜೂನ್ ತಿಂಗಳ ಬಳಿಕ ದಾಖಲಾದ ಅತಿ ಹೆಚ್ಚಿನ ಬೆಲೆಯಾಗಿದೆ.
ಅದೇ ರೀತಿ ಅಮೆರಿಕದ ಪ್ರಮುಖ ಕಚ್ಚಾ ತೈಲ ಮಾನದಂಡವಾದ ಡಬ್ಲೂಟಿಐ ದರ ಕೂಡ 1.1%ರಷ್ಟು ಏರಿಕೆಯಾಗಿದ್ದು, ಬ್ಯಾರಲ್ಗೆ 85.23 ಡಾಲರ್ಗೆ ಏರಿದೆ.ಜಗತ್ತಿನ ಸುಮಾರು 20% ನಷ್ಟು ತೈಲ ಸಾಗಣೆಯಾಗುವ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತೈಲ ಟ್ಯಾಂಕರ್ಗಳನ್ನು ತಡೆದು ದಾಳಿ ನಡೆಸಿದೆ.
ಅಮೆರಿಕದ ಸೇನಾ ನೆಲೆಗಳು ಹಾಗೂ ರೇಡಾರ್ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ ಸರಣಿ ದಾಳಿ ನಡೆಸಿದ್ದು, ಪ್ರತಿಯಾಗಿ ಅಮೆರಿಕ ಕೂಡ ಇರಾನ್ ಆಸ್ತಿಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಇದರಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.
ಇರಾನ್ ಮತ್ತು ಅಮೆರಿಕ ಮಧ್ಯೆ ಕದನ ವಿರಾಮ ಘೋಷಣೆಯಾಗಿ ಮಾತುಕತೆ ಆರಂಭವಾದ ಬಳಿಕ ಜೂನ್ ಕೊನೆಯ ವಾರದಲ್ಲಿ ಕಚ್ಚಾ ತೈಲ ದರ 70 ಡಾಲರ್ಗೆ ಇಳಿಕೆಯಾಗಿತ್ತು.ಕಚ್ಚಾ ತೈಲ ಬೆಲೆ ಶೀಘ್ರವಾಗಿ ಏರುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದ್ದು, ಹಣದುಬ್ಬರ ಮತ್ತೆ ಏರಿಕೆಯಾಗುವ ಆತಂಕ ಸೃಷ್ಟಿಯಾಗಿದೆ. ತೈಲ ಬೆಲೆ ಜಿಗಿತದಿಂದಾಗಿ ಏಷ್ಯನ್ ಷೇರು ಮಾರುಕಟ್ಟೆಗಳು ಹಾಗೂ ಹೂಡಿಕೆದಾರರಲ್ಲಿ ಅಸ್ಥಿರತೆ ಉಂಟಾಗಿದೆ.
ಇಂಧನ ಬೆಲೆ ಸತತವಾಗಿ 90 ಡಾಲರ್ ದಾಟಿ ಮುನ್ನುಗುತ್ತಿರುವುದು ಭಾರತ ಸೇರಿದಂತೆ ಪ್ರಮುಖ ಆಮದುದಾರ ದೇಶಗಳಿಗೆ ಆರ್ಥಿಕ ಹೊರೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಪ್ರಭಾವ ಬೀರಬಹುದು ಎಂದು ಅಂದಾಜಿಸಲಾಗಿದೆ.
