Homeರಾಷ್ಟ್ರೀಯಕಾಕ್ರೋಚ್‌ ನಾಯಕರ ಜಾಮೀನು ವಿಚಾರಣೆ ನಡೆಸುತ್ತಿದ್ದ ಮ್ಯಾಜಿಸ್ಟ್ರೇಟ್‌ಗೆ ಬೆದರಿಕೆ : ಎಫ್‌ಐಆರ್ ದಾಖಲು

ಕಾಕ್ರೋಚ್‌ ನಾಯಕರ ಜಾಮೀನು ವಿಚಾರಣೆ ನಡೆಸುತ್ತಿದ್ದ ಮ್ಯಾಜಿಸ್ಟ್ರೇಟ್‌ಗೆ ಬೆದರಿಕೆ : ಎಫ್‌ಐಆರ್ ದಾಖಲು

ನವದೆಹಲಿ, ಅ. 19: ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಅಶುತೋಷ್‌ ರಂಕಾ ಮತ್ತು ಸೌರವ್‌ ದಾಸ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿದ್ದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ಅಪರಿಚಿತ ವ್ಯಕ್ತಿಗಳು ಬೆದರಿಕೆ ಹಾಕಿರುವ ಆತಂಕಕಾರಿ ಘಟನೆ ನಡೆದಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು, ಅಪರಿಚಿತ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್‌ ಬೆದರಿಕೆ ಹಾಗೂ ನ್ಯಾಯಾಂಗ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಈ ಬೆದರಿಕೆಯ ಬೆನ್ನಲ್ಲೇ ನಿನ್ನೆ ನಡೆಯಬೇಕಿದ್ದ ಇಬ್ಬರು ನಾಯಕರ ನ್ಯಾಯಾಂಗ ಕಸ್ಟಡಿ ಮತ್ತು ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರ ವಿರುದ್ಧ ಸಿಜೆಪಿ ಕಾರ್ಯಕರ್ತರು ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಪ್ರತಿಭಟನೆಗೆ ಅಧಿಕೃತ ಅನುಮತಿ ಇಲ್ಲದಿದ್ದರೂ, ಜಂತರ್‌ ಮಂತರ್‌ನ ಮುಚ್ಚಿದ ಬ್ಯಾರಿಕೇಡ್‌ ಹಾಗೂ ಗೇಟ್‌ ದಾಟಿ ಒಳನುಗ್ಗಿದ ಆರೋಪದ ಮೇಲೆ ಅಶುತೋಷ್‌ ರಂಕಾ, ಸೌರವ್‌ ದಾಸ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ವಿಶೇಷ ನ್ಯಾಯಾಲಯವು ಇಬ್ಬರು ನಾಯಕರಿಗೆ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಅವರನ್ನು ತಿಹಾರ್‌ ಜೈಲಿಗೆ ಕಳುಹಿಸಲಾಗಿತ್ತು. ತಮ್ಮ ನಾಯಕರ ಬಂಧನ ಕಾನೂನುಬಾಹಿರ ಎಂದು ಹೇಳಿರುವ ಸಿಜೆಪಿ, ಈ ಕುರಿತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರ ಕಾನೂನು ಸಲಹೆ ಪಡೆದಿರುವುದಾಗಿ ಶನಿವಾರ ತಿಳಿಸಿತ್ತು.

“ಭಾನುವಾರದೊಳಗೆ ನಮ್ಮ ನಾಯಕರನ್ನು ಬೇಷರತ್ತಾಗಿ ಬಿಡುಗಡೆ ಮಾಡದಿದ್ದರೆ ಪೊಲೀಸರ ವಿರುದ್ಧವೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ” ಸಂಘಟನೆ ಎಚ್ಚರಿಕೆ ನೀಡಿತ್ತು. ಮ್ಯಾಜಿಸ್ಟ್ರೇಟ್‌ಗೆ ಬಂದ ಬೆದರಿಕೆ ಕರೆ ಅಥವಾ ಸಂದೇಶಗಳ ಮೂಲ ಯಾವುದು? ಇದರ ಹಿಂದೆ ಇರುವ ಸಂಘಟಿತ ವ್ಯಕ್ತಿಗಳು ಯಾರು ಎಂಬುದನ್ನು ಪತ್ತೆಹಚ್ಚಲು ದೆಹಲಿ ಸೈಬರ್‌ ಸೆಲ್‌ ಮತ್ತು ಸ್ಥಳೀಯ ಪೊಲೀಸರು ಕರೆ ವಿವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

RELATED ARTICLES
spot_img

Latest News