Homeರಾಷ್ಟ್ರೀಯಜನರೇ ಆಡಳಿತ ಬದಲಾವಣೆ ಬಯಸುತ್ತಿದ್ದಾರೆ : ಕಪಿಲ್‌ ಸಿಬಲ್‌

ಜನರೇ ಆಡಳಿತ ಬದಲಾವಣೆ ಬಯಸುತ್ತಿದ್ದಾರೆ : ಕಪಿಲ್‌ ಸಿಬಲ್‌

ನವದೆಹಲಿ, ಅ. 17 (ಪಿಟಿಐ): ಕಾಂಗ್ರೆಸ್‌ ಪಕ್ಷವು ಆಡಳಿತ ಬದಲಾವಣೆಯನ್ನು ಬಯಸುತ್ತಿದೆ ಎಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಮಾಡಿರುವ ಆರೋಪಕ್ಕೆ ರಾಜ್ಯಸಭಾ ಸಂಸದ ಕಪಿಲ್‌ ಸಿಬಲ್‌ ತಿರುಗೇಟು ನೀಡಿದ್ದಾರೆ. ಆಡಳಿತ ಬದಲಾವಣೆಯನ್ನು ಬಯಸುತ್ತಿರುವುದು ಸ್ವತಃ ಜನರೇ ಆಗಿದ್ದು, ಈಗಿನ ಸರ್ಕಾರ ನಿರ್ಗಮಿಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳನ್ನು ರಾಜನಾಥ್‌ ಸಿಂಗ್‌ ತೀವ್ರವಾಗಿ ಟೀಕಿಸಿದ್ದರು. ಬಾಂಗ್ಲಾದೇಶದಲ್ಲಿ ನಡೆದ ರೀತಿಯಲ್ಲೇ ಭಾರತದಲ್ಲಿಯೂ ಆಡಳಿತ ಬದಲಾವಣೆಯನ್ನು ಅವರು ಬಯಸುತ್ತಿದ್ದಾರೆ. ಯುವಜನರ ಶಕ್ತಿಯನ್ನು ಬಳಸಿಕೊಂಡು ಅರಾಜಕತೆಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಂಗ್‌ ಆರೋಪಿಸಿದ್ದರು.

ಲಕ್ನೋದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್‌, ಪ್ರಜಾಪ್ರಭುತ್ವದಲ್ಲಿ ಯಾರಿಗೂ ಗೊಂದಲ ಅಥವಾ ಅರಾಜಕತೆಯನ್ನು ಸೃಷ್ಟಿಸಲು ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕುಂದಿಸಲು ಅವಕಾಶವಿಲ್ಲ ಎಂದು ಹೇಳಿದರು.

ಎಕ್ಸ್‌ ಮೂಲಕ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಪಿಲ್‌ ಸಿಬಲ್‌, “ರಾಜನಾಥ್‌ ಸಿಂಗ್‌ ಅವರೇ, ಕಾಂಗ್ರೆಸ್‌ ಪಕ್ಷವು ಬಾಂಗ್ಲಾದೇಶದ ಮಾದರಿಯಲ್ಲಿ ಆಡಳಿತ ಬದಲಾವಣೆಯನ್ನು ಬಯಸುತ್ತಿದೆ ಎಂದು ನೀವು ಆರೋಪಿಸುತ್ತಿದ್ದೀರಿ. ಆದರೆ, ಅದು ನಿಜವಲ್ಲ. ಆಡಳಿತ ಬದಲಾವಣೆಯನ್ನು ಬಯಸುತ್ತಿರುವುದು ಜನರು” ಎಂದು ಹೇಳಿದ್ದಾರೆ.

‘ಭ್ರಷ್ಟಾಚಾರದ ವಿರುದ್ಧ ಭಾರತ’ ಎಂಬ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಗಳು ನಿಮ್ಮನ್ನು ಅಧಿಕಾರಕ್ಕೆ ತಂದವು. ಆದರೆ, ನಂತರ ನೀವು ಭ್ರಷ್ಟಾಚಾರವನ್ನೇ ಅಪ್ಪಿಕೊಂಡಿರಿ; ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿರಿ; ಮತದಾರರ ಪಟ್ಟಿಯಲ್ಲಿ ತಿರುಚುವಿಕೆ ನಡೆಸಿದಿರಿ. ಈಗ ನಿಮ್ಮ ನಿರ್ಗಮನದ ಸಮಯ ಬಂದಿದೆ ಎಂದು ಸ್ವತಂತ್ರ ಸಂಸದ ಸಿಬಲ್‌ ಟೀಕಿಸಿದ್ದಾರೆ.

RELATED ARTICLES
spot_img

Latest News