ನವದೆಹಲಿ,ಆ.21- ಪರಿಶಿಷ್ಟ ಜಾತಿಗಳಲ್ಲಿ ಅಗತ್ಯ ಇರುವವರಿಗೆ ಒಳಮೀಸಲಾತಿ ನೀಡಬೇಕೆಂದು ನೀಡಿದ್ದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ನಾಳೆ ಮೀಸಲಾತಿ ಬಚಾವೋ ಸಂಘರ್ಷ ಸಮಿತಿಯು ರಾಷ್ಟ್ರವ್ಯಾಪಿ ಬಂದ್‍ಗೆ ಕರೆ ನೀಡಿದೆ. ಆ.1ರಂದು ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿಗಳು (ಎಸ್‍ಸಿಗಳು) ಮತ್ತು ಪರಿಶಿಷ್ಟ ಪಂಗಡಗಳು (ಎಸ್‍ಟಿಗಳು) ಒಳಗೆ ಉಪ-ವರ್ಗಗಳನ್ನು ರಚಿಸಲು ರಾಜ್ಯಗಳಿಗೆ ಅನುಮತಿ ನೀಡಿದೆ.
ನಿಜವಾಗಿಯೂ ಅಗತ್ಯವಿರುವವರಿಗೆ ಮೀಸಲಾತಿಯಲ್ಲಿ ಆದ್ಯತೆ ನೀಡಬೇಕು ಎಂದು ಹೇಳಿದೆ. ಆದರೆ ಸರ್ವೋಚ್ಛ ನ್ಯಾಯಾಲಯದ ಈ ತೀರ್ಪನ್ನು ವಿರೋಧಿಸಿ ಮತ್ತು ನ್ಯಾಯಾಲಯದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಭಾರತ್ ಬಂದ್ ನಡೆಸಲಾಗುತ್ತಿದೆ.
ಉತ್ತರ ಭಾರತದಲ್ಲಿ ಅಲರ್ಟ್: ಭಾರತ್ ಬಂದ್ ವೇಳೆ ಹಿಂಸಾಚಾರವನ್ನು ತಪ್ಪಿಸಲು ಬಂದ್‍ಗೆ ಸಿದ್ಧತೆಯನ್ನು ಪರಿಶೀಲಿಸಲು ಹಿರಿಯ ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಎಲ್ಲ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಹಿರಿಯಪೊಲೀಸ್ ಅಧಿಕಾರಿಗಳು ವಿಡಿಯೋ ಕಾನರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದು, ಬಂದ್‍ಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಭಾರತ್ ಬಂದ್‍ಗೆ ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳ ಬೆಂಬಲ ಸಿಗುವ ನಿರೀಕ್ಷೆಯಿದೆ. ಪಶ್ಚಿಮ ಉತ್ತರ ಪ್ರದೇಶವನ್ನು ವಿಶೇಷವಾಗಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ ಅಲ್ಲಿ ಪೊಲೀಸರನ್ನು ಹೆಚ್ಚಿನ ಅಲರ್ಟ್‍ನಲ್ಲಿ ಇರಿಸಲಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ವ್ಯಾಪಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಈ ಭಾಗದಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಕಚೇರಿಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದಿಲ್ಲ. ಆಂಬ್ಯುಲೆನ್ಸ್‍ಗಳಂತಹ ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ.
ಈ ಸೇವೆಗಳಿಗೆ ಸಮಸ್ಯೆಯಿಲ್ಲ :
- ತುರ್ತು, ಆಂಬ್ಯುಲೆನ್ಸ್ ಸೇವೆಗಳು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು
- ಪೊಲೀಸ್ ಸೇವೆಗಳು ಸಕ್ರಿಯವಾಗಿರಲಿವೆ.
- ಅಗತ್ಯ ಔಷಧಿಗಳನ್ನು ಒದಗಿಸಲು ಫಾರ್ಮಸಿಗಳು ಸಹ ತೆರೆದಿರುತ್ತವೆ.
- ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು, ಶಾಲಾ-ಕಾಲೇಜುಗಳು ಎಂದಿನಂತೆ ಇರುತ್ತವೆ.