ಬೆಂಗಳೂರು,ನ.19- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ನಕ್ಸಲ್ ಚಟುವಟಿಕೆಗಳು ನಡೆಯುತ್ತವೆ. ಇದಕ್ಕೆ ಸರ್ಕಾರದ ಧೋರಣೆಯೇ ಕಾರಣ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತು ಪೊಲೀಸರ ಕಾರ್ಯಚರಣೆಯನ್ನು ಸ್ವಾಗತ ಮಾಡುತ್ತೇನೆ. ಅನೇಕ ವರ್ಷಗಳಿಂದ ನಕ್ಸಲ್ ಚಟುವಟಿಕೆಗಳು ಸ್ತಬ್ದವಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಮತ್ತೆ ನಕ್ಸಲ್ ಚಟುವಟಿಕೆಗಳು ಶುರುವಾಗಿದೆ ಎಂದು ಆರೋಪಿಸಿದರು.
ನಗರ ನಕ್ಸಲ್ಗಳು ಸಹ ಇದ್ದಾರೆ. ಕಾಡಿನಲ್ಲಿ ಕೂತು ಬಂದೂಕು ಹಿಡಿದು ಕಾರ್ಯಚರಣೆ ಮಾಡುವವರು ಇದ್ದಾರೆ. ನಮ ಸರ್ಕಾರದ ಅವಧಿಯಲ್ಲಿ ನಕ್ಸಲ್ ಚಟುವಟಿಕೆಯನ್ನು ಮಟ್ಟ ಹಾಕಿದ್ದೆವು. ಇವರೆಲ್ಲ ಹೊರ ರಾಜ್ಯಗಳಲ್ಲಿ ತಲೆಮರಿಸಿಕೊಂಡಿದ್ದರು. ಈಗಿನ ಸರ್ಕಾರ ಬಂದ ಮೆಲೆ ಮತ್ತೆ ತಮ ಚಟುವಟಿಕೆಗಳನ್ನು ನಡೆಸಲು ಬಂದಿದ್ದಾರೆ ಎಂದರು.
ನಗರ ನಕ್ಸಲ್ಗಳ ಚಟುವಟಿಕೆಗಳನ್ನ ಸರ್ಕಾರ ಗಮನಿಸಬೇಕು. ವಿಶ್ವವಿದ್ಯಾಲಯ, ಸಾಹಿತಿಗಳು ಎಂದು ಹೇಳಿಕೊಳ್ಳುವವರು, ಬುದ್ಧಿ ಜೀವಿಗಳು ಈ ನಕ್ಸಲ್ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾರೆ ಎಂದರು.
ನಕ್ಸಲರ ಮಟ್ಟ ಹಾಕಬೇಕು. ಕ್ಷಮೆ ಕೋರಿ ಬರುವ ವಿಚಾರದಲ್ಲಿ ಸರ್ಕಾರ ಚರ್ಚೆ ಮಾಡಬೇಕು. ನಕ್ಸಲ್ ಚಟುವಟಿಕೆಯನ್ನ ಮತ್ತೆ ನಗರಕ್ಕೆ ಬಂದು ಮುಂದುವರಿಸುವವರಿದ್ದಾರೆ. ಅದರ ಬಗ್ಗೆ ನಿಗಾವಹಿಸಬೇಕು. ನಕ್ಸಲ್ ನಿಗ್ರಹ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದು ತಿಳಿಸಿದರು.
ವಿಜಯಪುರ ಶಾಸಕ ಗವಿಯಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಮ ಶಾಸಕರಿಗೆ ಮಾತ್ರ ಅನುದಾನ ನೀಡುತ್ತಿಲ್ಲ ಅಂದುಕೊಂಡಿದ್ದೆ. ರಾಜ್ಯದ 224 ಕ್ಷೇತ್ರದ ಅಭಿವೃದ್ಧಿಗೆ ಈ ಸರ್ಕಾರ ಒಂದು ರೂಪಾಯಿ ನೀಡುತ್ತಿಲ್ಲ. ಅವರ ಶಾಸಕರೇ ತಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಟೀಕಿಸಿದರು.
ನಮ ಸರ್ಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯಾಗುತ್ತಿದೆ. ಉಡುಪಿ, ಕಾರ್ಕಳ, ಮೂಡಿಗೆರೆ ಸೇರಿದಂತೆ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಇನ್ನೂ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡಬೇಕು. ಅದಕ್ಕಾಗಿ ವಿಶೇಷ ಪ್ಯಾಕೇಜ್ ನೀಡಬೇಕು.
ಆದರೆ ಇವರು ಒಂದೇ ಒಂದು ಅಭಿವೃದ್ಧಿ ಕಾರ್ಯಕ್ರಮದ ಶಂಕುಸ್ಥಾಪನೆಯನ್ನು ಇಲ್ಲಿಯವರೆಗೆ ಮಾಡಿಲ್ಲ. ಈ ಸರ್ಕಾರ ಹಗರಣಗಳಲ್ಲಿ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.