ಮಂಗಳೂರು, ಮಾ.18-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ 5 ವರ್ಷಗಳಿಂದ ನಿಯಂತ್ರಣದಲ್ಲಿದ್ದ ನಕ್ಸಲ್ ಚಟುವಟಿಕೆ ಮತ್ತೆ ಶುರುವಾಗಿದೆ. ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಇರುವ ಅಂಗಡಿಯೊಂದಕ್ಕೆ ಎಂಟು ಮಂದಿ ನಕ್ಸಲರ ತಂಡ ಆಗಮಿಸಿ ದಿನಸಿ ಖರೀದಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಎಚ್ಚೆತ್ತ ಪೆಪೊಲೀಸ್ ಪಡೆ ನಕ್ಸಲರಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ನಕ್ಸಲರು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೂಜಿಮಲೆ, ಕಲ್ಮಕಾರ್‍ಕ್ಕೆ ನಕ್ಸಲ್ ನಿಗ್ರಹ ಪಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕೆಲ ದಿನಗಳ ಹಿಂದೆ ಕೊಲ್ಲೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ನಕ್ಸಲರು, ಇದೀಗ ದಕ್ಷಿಣ ಕನ್ನಡದ ಗಡಿ ಭಾಗದಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಕೇರಳದಿಂದ ಬೈಂದೂರುಗೆ ಆಗಮಿಸಿರುವ ಅನುಮಾನ ವ್ಯಕ್ತವಾಗಿತ್ತು. ಉಡುಪಿಯ ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲ್ಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮ ಸುತ್ತಮುತ್ತ ಓಡಾಡಿರುವ ಶಂಕೆ ಮೂಡಿತ್ತು. 20 ವರ್ಷಗಳ ಹಿಂದೆ ಆತ ನಕ್ಸಲೈಟ್ ಆಗಿದ್ದು ಕೇರಳದಲ್ಲಿ ಈತ ತನ್ನ ಚಟುವಟಿಕೆ ಇತ್ತು. ಮೂವರು ಸಶಸ್ತ್ರಧಾರಿಯಾಗಿ ಬೈಂದೂರಿಗೆ ಆಗಮಿಸಿರುವ ಮಾಹಿತಿ ಲಭ್ಯವಾಗಿತ್ತು. ನಕ್ಸಲರ ಓಡಾಟ ಮಾಹಿತಿ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ.