ಬೆಂಗಳೂರು,ನ.19- ಶಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಮಾನ್ಯ ಜೀವನ ನಡೆಸಲು ಬಯಸುವರಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 20 ವರ್ಷದಿಂದಲೂ ನಕ್ಸಲ್ ಎಂದು ಗುರುತಿಸಲಾದ ವಿಕ್ರಂಗೌಡ ತಲೆಮರೆಸಿಕೊಂಡು ಓಡಾಡುತ್ತಿದ್ದ. ಪೊಲೀಸರು ಹಲವಾರು ಬಾರಿ ಪ್ರಯತ್ನಪಟ್ಟರೂ ಆತನನ್ನು ಬಂಧಿಸುವುದಕ್ಕಾಗಲೀ ಅಥವಾ ಎನ್ಕೌಂಟರ್ ಮಾಡುವುದಕ್ಕಾಗಲೀ ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.
ಕಳೆದ ವಾರ ರಾಜು ಮತ್ತು ಲತಾ ಎಂಬ ಇಬ್ಬರು ನಕ್ಸಲೀಯರು ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಲೆನಾಡು ಭಾಗದಲ್ಲಿ ಕೂಂಬಿಂಗ್ ನಡೆಯುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಪೊಲೀಸರು ಅವರನ್ನು ಹುಡುಕಿಕೊಂಡು ಹೋಗಿದ್ದಾರೆ. ಪೊಲೀಸರನ್ನು ಕಂಡ ತಕ್ಷಣ ನಕ್ಸಲೀಯರು ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಎನ್ಕೌಂಟರ್ ಮಾಡುವುದು ಅನಿವಾರ್ಯವಾಗಿತ್ತು ಎಂದು ಗೃಹಸಚಿವರು ಮಾಹಿತಿ ನೀಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ವಿಕ್ರಂ ಗೌಡ ಸಾವನ್ನಪ್ಪಿದ್ದು, ಅವರ ಜೊತೆಯಲ್ಲಿದ್ದ ಇನ್ನೂ 2-3 ಜನ ತಪ್ಪಿಸಿಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದರು.
ಕುದುರೆಮುಖ ರಾಷ್ಟ್ರೀಯ ಯೋಜನೆ, ಕಸ್ತೂರಿ ರಂಗನ್ ವರದಿ ಸೇರಿದಂತೆ ಹಲವು ವಿಚಾರಗಳಲ್ಲಿ ವಿಕ್ರಂ ಗೌಡ ಹೋರಾಟ ನಡೆಸುತ್ತಿದ್ದುದು ತಿಳಿದುಬಂದಿದೆ ಎಂದರು.
ಒಂದಷ್ಟು ಜನ ನಕ್ಸಲೀಯರು ಈ ಹಿಂದೆ ಶಸ್ತ್ರ ತ್ಯಜಿಸಿ ಶರಣಾಗಿದ್ದರು. ಅವರನ್ನು ಗೃಹಕಚೇರಿ ಕೃಷ್ಣಗೆ ಕರೆತಂದು ತಿಳುವಳಿಕೆ ನೀಡಿ ಸಮಾಜದ ಮುಖ್ಯವಾಹಿನಿಗೆ ಸೇರಿಸಲಾಗಿತ್ತು.
ಪಾವಗಡ ಸೇರಿದಂತೆ ಹಲವು ಭಾಗಗಳಲ್ಲಿ ಈ ರೀತಿ ನಕ್ಸಲೀಯರು ಶರಣಾಗಿದ್ದರು. ಈಗಲೂ ಆ ಯೋಜನೆ ಚಾಲ್ತಿಯಲ್ಲಿದೆ. ಶಸ್ತ್ರ ತ್ಯಜಿಸಿ ಶರಣಾಗಲು ಬಯಸುವ ನಕ್ಸಲರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಲಿದೆ ಎಂದರು.
ನಕ್ಸಲೀಯರು ಇಲ್ಲ ಎಂದು ನಾವು ತಿಳಿದುಕೊಂಡಿದ್ದೆವು. ಕಳೆದ ವಾರ ಇಬ್ಬರು ಪತ್ತೆಯಾದ ಬಳಿಕ ಈ ಕಾರ್ಯಾಚರಣೆ ಚುರುಕುಗೊಂಡಿತ್ತು. ವಿಕ್ರಂ ಗೌಡ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.