ಬೆಂಗಳೂರು,ಆ.8- ಬಿಜೆಪಿ ನೇತೃತ್ವದ ಎನ್‍ಡಿಎ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ವಿರೋ„ಯಾಗಿದ್ದು, ಫ್ಯಾಸಿಸ್ಟ್ ಮನಃಸ್ಥಿತಿಯನ್ನು ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ ಬೋರ್ಡ್‍ನ ಅಧಿಕಾರವನ್ನು ಮೊಟಕುಗೊಳಿಸುವ ಮಸೂದೆಯನ್ನು ಸಂಸತ್‍ನಲ್ಲಿ ಮಂಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು.
ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಲ್ಪಸಂಖ್ಯಾತರ ವಿರೋಧಿ ಎಂಬುದನ್ನು ಈ ಮಸೂದೆ ಸಾಬೀತುಪಡಿಸುತ್ತದೆ. ಎನ್‍ಡಿಎ ಜಾತ್ಯತೀತ ನಿಲುವಿಗೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಅವರು ಕೋಮುವಾದಿಗಳು ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ಬಿ.ಕೆ.ಹರಿಪ್ರಸಾದ್ ನಮ್ಮ ಪಕ್ಷದ ನಾಯಕರು. ಅವರು ಭೇಟಿಯಾಗುವುದರಲ್ಲಿ ವಿಶೇಷ ಏನೂ ಇಲ್ಲ. ಬಹಳ ದಿನದಿಂದ ನಾವು ಭೇಟಿಯಾಗಿರಲಿಲ್ಲ. ಹೀಗಾಗಿ ಸುಮ್ಮನೇ ಪರಸ್ಪರ ಉಭಯ ಕುಶಲೋಪರಿ ಚರ್ಚಿಸಿದ್ದೇವೆ ಎಂದು ಹೇಳಿದರು.
ಜನಾಂದೋಲನದ ವಿಚಾರದ ಬಗ್ಗೆ ನಾಳೆ ಮೈಸೂರಿನಲ್ಲೇ ಮಾತನಾಡುವುದಾಗಿ ತಿಳಿಸಿದರು. ಇದಕ್ಕೂ ಮುನ್ನ ವಿಧಾನಸೌಧದ ಮುಂಭಾಗದಲ್ಲಿರುವ ಎಸ್.ನಿಜಲಿಂಗಪ್ಪ ಅವರ ಪ್ರತಿಮೆಗೆ ಪುಣ್ಯಸ್ಮರಣೆ ಅಂಗವಾಗಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು.
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ದೇಶ ಕಂಡ ಪ್ರಾಮಾಣಿಕ ರಾಜಕಾರಣಿ. ಅವರು ತಮ್ಮ ಅಧಿಕಾರಾವಧಿಯುದ್ದಕ್ಕೂ ಕೆಲವು ಮೌಲ್ಯಗಳನ್ನು ಅಳವಡಿಸಿಕೊಂಡು ರಾಜಕೀಯ ಜೀವನ ನಡೆಸಿದರು.
ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೆ ಅದಕ್ಕೆ ನಿಜಲಿಂಗಪ್ಪ ಅಡಿಗಲ್ಲು ಹಾಕಿದ್ದೇ ಕಾರಣ. ದೇಶ ಮತ್ತು ರಾಜ್ಯದಲ್ಲಿ ಹೆಚ್ಚು ನೀರಾವರಿಯಾಗಿದ್ದರೆ ಅದಕ್ಕೆ ನಿಜಲಿಂಗಪ್ಪನವರ ದೂರದೃಷ್ಟಿಯೇ ಕಾರಣ. ಅವರ ಮಾರ್ಗದರ್ಶನಗಳು ನಮಗೆ ಸದಾ ಅನುಕರಣೀಯ. ರಾಜ್ಯದ ಅಭಿವೃದ್ಧಿಯಲ್ಲಿ ಅವರ ಪಾತ್ರ ದೊಡ್ಡದು ಎಂದು ಹೇಳಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಮುಖಂಡರಾದ ಎಚ್.ಎಂ.ರೇವಣ್ಣ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್, ಪ್ರಕಾಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.