Saturday, September 14, 2024
Homeಇದೀಗ ಬಂದ ಸುದ್ದಿನೀಟ್‌-ಯುಜಿ ಹಗರಣದಲ್ಲಿ ಪತ್ರಕರ್ತನ ಬಂಧನ

ನೀಟ್‌-ಯುಜಿ ಹಗರಣದಲ್ಲಿ ಪತ್ರಕರ್ತನ ಬಂಧನ

ನವದೆಹಲಿ,ಜೂ.29- ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ನೀಟ್‌- ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿಂದು ಪತ್ರಕರ್ತನೊಬ್ಬನನ್ನು ಸಿಬಿಐ ತನಿಖಾ ತಂಡ ಬಂಧಿಸಿದೆ. ಬಂಧಿತನನ್ನು ಹಿಂದಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜಮಾಲುದ್ದೀನ್‌ ಎಂದು ಗುರುತಿಸಲಾಗಿದೆ.

ಓಯಸಿಸ್‌‍ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್‌ ಹಕ್‌ ಮತ್ತು ಉಪಪ್ರಾಂಶುಪಾಲ ಇಮ್ತಿಯಾಜ್‌ ಆಲಂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪಾತ್ರವಹಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ಆಲಂ ಅವರನ್ನು ಎನ್‌ಟಿಎ ವೀಕ್ಷಕರಾಗಿ ಮತ್ತು ಓಯಸಿಸ್‌‍ ಶಾಲೆಯ ಕೇಂದ್ರ ಸಂಯೋಜಕರಾಗಿ ನೇಮಿಸಲಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಜಾರ್ಖಂಡ್‌ನ ಹಜಾರಿಬಾಗ್‌ನ ಜಿಲ್ಲೆಯ ಇನ್ನೂ ಐದು ಜನರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ.

ಮೇ 5 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌‍ಟಿಎ) ನಡೆಸಿದ ನೀಟ್‌ ಪರೀಕ್ಷೆಗೆ ಪ್ರಾಂಶುಪಾಲರು ಹಜಾರಿಬಾಗ್‌ ಜಿಲ್ಲಾ ಸಂಯೋಜಕರಾಗಿದ್ದರು. ಜೂ.27ರಂದು ನೀಟ್‌ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆಯ ಭಾಗವಾಗಿ ಸಿಬಿಐ ಪ್ರಕರಣದಲ್ಲಿ ತನ್ನ ಮೊದಲ ಬಂಧನವನ್ನು ಮಾಡಿತ್ತು.

ಅಧಿಕಾರಿಗಳ ಪ್ರಕಾರ ಪಾಟ್ನಾದ ಇಬ್ಬರು ಬಂಧಿತ ಆರೋಪಿಗಳಾದ ಅಶುತೋಷ್‌ಕುಮಾರ್‌ ಮತ್ತು ಮನೀಶ್‌ ಕುಮಾರ್‌ ಅವರು ಪರೀಕ್ಷೆಗೆ ಹಾಜರಾದ ಕೆಲವರಿಗೆ ಸೋರಿಕೆಯಾದ ನೀಟ್‌ ಪ್ರಶ್ನೆಪತ್ರಿಕೆ ಮತ್ತು ಉತ್ತರ ಕೀಗಳನ್ನು ನೀಡುವ ಸ್ಥಳವನ್ನು ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಜೂನ್‌ 23ರಂದು ಮೊದಲ ಸಿಬಿಐ ಎಫ್‌‍ಐಆರ್‌ ದಾಖಲಿಸಲಾಗಿದೆ, ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಯ ನಿರ್ವಹಣೆಯಲ್ಲಿನ ಅಕ್ರಮಗಳ ತನಿಖೆಯನ್ನು ಸರ್ಕಾರ ಸಿಬಿಐಗೆ ಹಸ್ತಾಂತರ ಮಾಡಿದೆ. ನೀಟ್‌‍- ಯುಜಿ ಅನ್ನು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಎಂಬಿಬಿಎಸ್‌‍, ಬಿಡಿಎಸ್‌‍, ಆಯುಷ್‌ ಮತ್ತು ಇತರ ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಎನ್‌ಟಿಎ ನಡೆಸುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ನೀಟ್‌-ಪಿಜಿ ಪರೀಕ್ಷೆಯನ್ನೂ ಮುಂದೂಡಿದೆ.

RELATED ARTICLES

Latest News