Thursday, July 4, 2024
Homeರಾಷ್ಟ್ರೀಯನೀಟ್‌ ಪರೀಕ್ಷಾ ವಿವಾದಕ್ಕೆ ಟ್ವಿಸ್ಟ್ : ತಪ್ಪೊಪ್ಪಿಕೊಂಡ ಆರೋಪಿಗಳು

ನೀಟ್‌ ಪರೀಕ್ಷಾ ವಿವಾದಕ್ಕೆ ಟ್ವಿಸ್ಟ್ : ತಪ್ಪೊಪ್ಪಿಕೊಂಡ ಆರೋಪಿಗಳು

ನವದೆಹಲಿ,ಜೂ.20- ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ನೀಟ್ ಪರೀಕ್ಷಾ ವಿವಾದಕ್ಕೆ ಹೊಸ ತಿರುವು ಲಭ್ಯವಾಗಿದೆ. ಬಿಹಾರ ಪೊಲೀಸರ ತನಿಖೆ ವೇಳೆ ನಾಲ್ವರು ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದು, ಪರೀಕ್ಷೆಗೆ ಒಂದು ದಿನ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾರೆ!

ನೀಟ್ – ಯುಜಿ 2024 ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ವಿದ್ಯಾರ್ಥಿಗಳು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ, 1,500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಕೃಪಾಂಕ ನೀಡಿಕೆ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೃಪಾಂಕ ವಾಪಸ್ ಪಡೆದಿದ್ದ ಕೇಂದ್ರ ಶಿಕ್ಷಣ ಸಚಿವಾಲಯ, ಕೃಪಾಂಕ ಪಡೆದಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಆದೇಶಿಸಿತ್ತು.

ಇದೇ ವೇಳೆ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಅನ್ನೋ ಆರೋಪವನ್ನು ಶಿಕ್ಷಣ ಸಚಿವಾಲಯ ನಿರಾಕರಿಸಿತ್ತು. ಆದರೆ, ಇದೀಗ ಬಂದಿರುವ ಸುದ್ದಿ ಕೇಂದ್ರ ಶಿಕ್ಷಣ ಸಚಿವಾಲಯದ ಸ್ಪಷ್ಟೀಕರಣಕ್ಕೇ ತಿರುಗೇಟು ನೀಡಿದೆ.

ಇದೀಗ ಬಿಹಾರದಲ್ಲಿ ಬಂಽತರಾಗಿರುವ ನಾಲ್ಕು ಮಂದಿಯ ಪೈಕಿ ಓರ್ವ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿ. ಆತನ ಹೆಸರು ಅನುರಾಗ್ ಯಾದವ್. ಮತ್ತೊಬ್ಬ ಆರೋಪಿ ದಾನಾಪುರ ಮುನ್ಸಿಪನ್ ಕೌನ್ಸಿಲ್ನ ಜ್ಯೂನಿಯರ್ ಎಂಜಿನಿಯರ್ ಸಿಕಂದರ್ ಯಾದವೇಂದು. ಇನ್ನು ಮತ್ತಿಬ್ಬರು ಆರೋಪಿಗಳಾದ ನಿತೀಶ್ ಕುಮಾರ್ ಹಾಗೂ ಅಮಿತ್ ಆನಂದ್ ಕೂಡಾ ಖಾಕಿ ಬಲೆಗೆ ಬಿದ್ದಿದ್ದಾರೆ.

ಈ ಆರೋಪಿಗಳಿಗೆ ಪರೀಕ್ಷೆಗೆ ಒಂದು ದಿನ ಮುನ್ನವೇ ಪ್ರಶ್ನೆ ಪತ್ರಿಕೆ ಸಿಕ್ಕಿತ್ತಂತೆ. ಇವರೆಲ್ಲರೂ ಪ್ರಶ್ನೆಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರಂತೆ. ಈ ಕುರಿತಾಗಿ ಬಿಹಾರ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದು, ಮಾರನೇ ದಿನ ನಡೆದ ಪರೀಕ್ಷೆ ವೇಳೆ ಇದೇ ಪ್ರಶ್ನೆಗಳು ಬಂದಿದ್ದವು ಎಂದು ಹೇಳಿದ್ದಾರೆ.

ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿ ಅನುರಾಗ್ ಯಾದವ್ ಈ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಶ್ನೆ ಪತ್ರಿಕೆ ಸಿಕ್ಕ ಕೂಡಲೇ ಇಡೀ ರಾತ್ರಿ ತಾನು ಪ್ರಶ್ನೆಗೆ ತಕ್ಕ ಉತ್ತರಗಳನ್ನ ಕಂಠಪಾಠ ಮಾಡುತ್ತಿದ್ದೆ. ಮಾರನೇ ದಿನ ಪರೀಕ್ಷೆಗೆ ಹಾಜರಾದಾಗ ನಾನು ಕಂಠ ಪಾಠ ಮಾಡಿದ ಪ್ರಶ್ನೆ ಹಾಗೂ ಉತ್ತರಗಳೇ ಅಲ್ಲಿದ್ದವು. ನಾನು ಎಲ್ಲ ಪ್ರಶ್ನೆಗೂ ಉತ್ತರ ಬರೆದೆ. ಆದರೆ ಪರೀಕ್ಷೆ ಬರೆದು ಹೊರ ಬಂದ ಮೇಲೆ ಪೊಲೀಸರು ನನ್ನನ್ನು ಬಂಧಿಸಿದರು. ಅವರ ವಿಚಾರಣೆ ವೇಳೆ ನಾನು ಎಲ್ಲವನ್ನೂ ಬಾಯಿ ಬಿಟ್ಟೆ ಎಂದು ಹೇಳಿದ್ದಾನೆ.

ಮತ್ತೊಬ್ಬ ಆರೋಪಿ ಯಾದವೇಂದು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ನಿತೀಶ್ ಕುಮಾರ್ ಹಾಗೂ ಅಮಿತ್ ಆನಂದ್ ಅವರು ತಾವು ಯಾವುದೇ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನೂ ಸೋರಿಕೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಹೇಳಿದ್ದರಂತೆ. ನೀಟ್ ಪರೀಕ್ಷೆ ಪಾಸ್ ಮಾಡಿಸಲು ಪ್ರತಿಯೊಬ್ಬರಿಗೂ 30 ರಿಂದ 32 ಲಕ್ಷ ರೂಪಾಯಿ ವೆಚ್ಚ ಆಗುತ್ತೆ ಎಂದೂ ಹೇಳಿದ್ದರಂತೆ!

ಈ ಡೀಲ್ಗೆ ಒಪ್ಪಿದ್ದ ಆರೋಪಿ ಯಾದವೇಂದು ತಾನು ನೀಟ್ ಪರೀಕ್ಷೆ ಬರೆಯುವ ನಾಲ್ವರು ವಿದ್ಯಾರ್ಥಿಗಳನ್ನು ಸಂಪರ್ಕಿಸುವುದಾಗಿ ಭರವಸೆ ನೀಡಿದ್ದನಂತೆ. ಇದಾದ ಬಳಿಕ ಜೂನ್ 4 ರಂದು ನಾಲ್ವರು ವಿದ್ಯಾರ್ಥಿಗಳನ್ನು ನಿತೀಶ್ ಹಾಗೂ ಅಮಿತ್ ಬಳಿ ಕರೆದೊಯ್ದ ಯಾದವೇಂದು, ಎಲ್ಲರಿಗೂ ತಲಾ 40 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟ. ಎಲ್ಲರಿಗೂ ಪ್ರಶ್ನೆ ಪತ್ರಿಕೆ ಕೂಡಾ ಸಿಕ್ಕಿತು ಎಂದು ವಿವರಿಸಿದ್ದಾನೆ.

ಆದರೆ ಮಾರನೇ ದಿನವೇ ಆರೋಪಿ ಯಾದವೇಂದುಗೆ ಗ್ರಹಚಾರ ಕೈ ಕೊಟ್ಟಿತ್ತು. ವಾಹನ ತಪಾಸಣೆ ವೇಳೆ ಆತನ ಬಳಿ ವಿದ್ಯಾರ್ಥಿಗಳ ಅಡ್ಮಿಟ್ ಕಾರ್ಡ್ ಪತ್ತೆಯಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ವೇಳೆ ಆರೋಪಿ ಯಾದವೇಂದು ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಬಾಯ್ಬಿಟ್ಟಿದ್ದ.

RELATED ARTICLES

Latest News