Tuesday, December 3, 2024
Homeಜಿಲ್ಲಾ ಸುದ್ದಿಗಳು | District Newsಹಾಸನ : ಸ್ನೇಹಿತನನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಹಾಸನ : ಸ್ನೇಹಿತನನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಹಾಸನ: ನಗರದ ಹೊಯ್ಸಳ ಬಡಾವಣೆಯಲ್ಲಿ ಇಬ್ಬರು ಗನ್ ಶೂಟ್ ಗೆ ಬಲಿಯಾಗಿದ್ದಾರೆ. ಬೆಂಗಳೂರು ಮೂಲದ ಆಸಿಫ್ (46) ಮತ್ತು ಹಾಸನದ ಆಡುವಳ್ಳಿಯ ಶರಾಫತ್ ಅಲಿ( 52) ಮೃತರು ಎಂದು ಗುರುತಿಸಲಾಗಿದೆ. ಇವರಿಬ್ಬರು ಸ್ನೇಹಿತರಾಗಿದ್ದು ಶುಂಠಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ .

ಇಂದು ಮಧ್ಯಾಹ್ನ 12.30 ರ ಸಮಯದಲ್ಲಿ ಕೆಎ 09 ಎಂಬಿ 3868 ನಿಸ್ಸಾನ್ ಕಾರಿನಲ್ಲಿ ಆಸಿಫ್ ಮತ್ತು ಶರಾಫತ್ ಆಲಿ ಹೊಯ್ಸಳ ನಗರಕ್ಕೆ ಬಂದಿದ್ದಾರೆ ಹಾಗೂ ಪಕ್ಕದಲ್ಲಿಯೇ ನಿವೇಶನವನ್ನು ನೋಡಿದ್ದು ನಂತರ ಕಾರಿನ ಒಳಗೆ ಕುಳಿತು ಮಾತನಾಡುತ್ತಿರುವಾಗ ಆಸಿಫ್ , ಶರಫ್ ಆಲಿ ಅವರಿಗೆ ಗುಂಡನ್ನು ಹಾರಿಸಿದ್ದಾರೆ. ನಂತರ ಆಸಿಫ್ ಅವರು ತಲೆಗೆ ಗುಂಡುಹಾರಿಸಿಕೊಂಡು ಕಾರಿನಲ್ಲಿಯೇ ಮೃತಪಟ್ಟಿದ್ದು ಈ ಕೃತ್ಯಕ್ಕೆ ಬಳಸಿದ ಗನ್ ಕಾರಿನೊಳಗೆ ಇರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಪಟಾಕಿ ಸದ್ದು ಎಂದು ತಿಳಿದ ನಿವಾಸಿಗಳು:
ಗನ್ ಶೂಟ್ ನಡೆದ ನಂತರ ಸುತ್ತಮುತ್ತಲಿನ ಜನರು ಪಟಾಕಿ ಸದ್ದು ಎಂದು ತಿಳಿದಿದ್ದರು ನಂತರ ಕಾರಿನಿಂದ ಆಚೆ ಬಿದ್ದಿದ್ದ ಶರಫತ್ ಅಲಿ ಅವರನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ನಂತರ ಸ್ಥಳಕ್ಕೆ ಕೆ ಆರ್ ಪುರಂ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ . ಘಟನೆ ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜಿತಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಹಾಗೂ ಬೆರಳಚ್ಚು ತಜ್ಞರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತ ಶರಫತ್ ಅವರು ಹತ್ತು ವರ್ಷಗಳಿಂದ ಹಾಸನದಲ್ಲಿಯೇ ವಾಸವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಪೂರ್ಣ ತನಿಖೆ ನಂತರ ಸ್ಪಷ್ಟ ಮಾಹಿತಿ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ ಪಿ ಮೊಹಮ್ಮದ್ ಸುಜಿತಾ ಅವರು ನಿವೇಶನ ನೋಡಲು ಆಗಮಿಸಿದ ಇಬ್ಬರು ಕಾರಿನೊಳಗೆ ಕೂತಿರುವ ವೇಳೆ ಗನ್ ಶೂಟ್ ನಡೆದಿದೆ. ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ತನಿಖೆ ನಡೆಯುತ್ತಿದೆ .

ಕೃತ್ಯದ ವೇಳೆ ಬಳಸಿರುವ ಕಾರು ಮೈಸೂರಿನ ಜಿಲ್ಲೆಯ ರಿಜಿಸ್ಟರ್ ನಂಬರ್ ಆಗಿದ್ದು ಇಲ್ಲಿಗೆ ಏಕೆ ತರಲಾಗಿದೆ ಹಾಗೂ ಯಾವ ಕಾರಣಕ್ಕೆ ಕೃತಿ ನಡೆದಿದೆ ಎಂಬ ಬಗ್ಗೆ ಎಲ್ಲಾ ಆಯಮದಲ್ಲಿಯೂ ತನಿಖೆ ಮುಂದುವರೆದಿದೆ.

ಪ್ರಕರಣ ನಡೆಯುವ ಸಂದರ್ಭದಲ್ಲಿ ಹಾಗೂ ಕಾರು ಇಲ್ಲಿಗೆ ಬಂದಂತಹ ವೇಳೆ ಮತ್ತೆ ಯಾರಾದರೂ ಬಂದಿದ್ದಾರೆಯೇ ಬೇರೆ ವಾಹನ ಸಾಗಿದೆಯೇ ಎಂಬುದರ ಕುರಿತು ಸುತ್ತಮುತ್ತಲಿನ ಮನೆಯ ಸಿಸಿಟಿವಿ ಕ್ಯಾಮೆರಾ ಗಳನ್ನು ಪರಿಶೀಲನೆ ನಡೆಸಲಾಗುವುದು, ಕೃತ್ಯಕ್ಕೆ ಬಳಸಿದ ಗನ್ ಕಾರಿನೊಳಗೆ ದೊರೆತಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಗನ್ನಿನ ಮಾದರಿ ಹಾಗೂ ಇತರೆ ಮಾಹಿತಿ ದೊರೆಯಲಿದೆ .

ಓರ್ವ ವ್ಯಕ್ತಿಗೆ ತಲೆಗೆ ಗುಂಡು ತಗುಲಿದ್ದು, ಮತ್ತೊಬ್ಬರಿಗೆ ಗುಂಡು ಎಲ್ಲೆಲ್ಲಿ ತಗುಲಿ ಸಾವಾಗಿದೆ ಎಂಬುದು ವಿಧಿವಿಜ್ಙಾನ ಪರೀಕ್ಷೆಯ ನಂತರವಷ್ಠೆ ತಿಳಿಯಲಿದೆ ಎಂದು ವಿವರಿಸಿದರು. ರಿಯಲ್ ಎಸ್ಟೇಟ್ ಹಾಗೂ ಹಣಕಾಸಿನ ವ್ಯವಹಾರ ಸಂಬಂಧ ಇಬ್ಬರಲ್ಲೂ ಮನಸ್ತಾಪ ಉಂಟಾಗಿ ಪ್ರಕರಣ ನಡೆದಿದೆ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಸ್ಪಿ ಮೊಹಮ್ಮದ್ ಸುಜಿತಾ ತಿಳಿಸಿದ್ದಾರೆ.

ಕಾರಿನಲ್ಲಿ ಗನ್:
ಪ್ರಕರಣ ದಲ್ಲಿ ಕಾರಿನೊಳಗೆ ಗನ್ ದೊರೆತಿದ್ದು ಇದಕ್ಕೆ ಪರವಾನಗಿ ಪಡೆಯಲಾಗಿದೆಯೇ ಅಥವಾ ಅನಧಿಕೃತವಾಗಿ ಖರೀದಿಸಿ ತರಲಾಗಿತ್ತೆ ಎಂಬುದರ ಬಗ್ಗೆಯೂ ಪೊಲೀಸರು ತೀವ್ರತನಿಗೆ ಮುಂದುವರಿಸಿದ್ದಾರೆ.

ದಶಕ ಬಳಿಕ ಶೂಟೌಟ್:
ನಗರದ ಹೃದಯ ಭಾಗದಲ್ಲಿ ಅಪೂರ್ವ ಹೋಟೆಲ್ ಬಳಿ ದಶಕಗಳ ಹಿಂದೆ ಅಪ್ಸರ್ ಎಂಬ ವ್ಯಕ್ತಿಯ ಮೇಲೆ ಶೂಟ್ ಔಟ್ ನಡೆದಿತ್ತು, ತದನಂತರ ಇಂದು ಗನ್ ಶೂಟ್ ಪ್ರಕರಣ ನಡೆದಿದ್ದು ನಗರದ ನಾಗರಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಹರಿದಾಡಿದ ಅಂತೆ-ಕಂತೆಗಳು :
ಶೂಟ್ ಔಟ್ ಪ್ರಕರಣ ಸುದ್ದಿ ಹರಡಿದ ನಂತರ ಜನರ ಬಾಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಬಗೆಯ ಅಂತೆ-ಕಂತೆ ಎಂಬ ಮಾಹಿತಿ ಹರಿದಾಡಿತು.

ಕೆಲ ಹಂತಕರು ಬಂದು ಇಬ್ಬರು ಯುವಕರನ್ನು ಶೂಟ್ ಮಾಡಿದ್ದಾರೆ ಎಂಬ ಬಗ್ಗೆಯೂ ವರದಿಯಾಗಿತ್ತು, ಆದರೆ ಎಸ್ಪಿ ಸ್ಥಳ ಪರಿಶೀಲನೆ ನಡೆಸಿ ಹೇಳಿಕೆ ನೀಡಿದ ನಂತರ ಪ್ರಕರಣ ಸಂಬಂಧ ಪ್ರಾಥಮಿಕ ಮಾಹಿತಿಯನ್ನು ತಿಳಿಸಿದ್ದು ಹಣಕಾಸಿನ ವ್ಯವಹಾರದಲ್ಲಿ ಮನಸ್ತಾಪದಿಂದ ಈ ರೀತಿ ಗನ್ ಶೂಟ್ ನಡೆದಿದೆ ಎಂದು ಎಸ್ ಪಿ ಸ್ಪಷ್ಟಪಡಿಸಿದರು ಆದರೆ ಇನ್ನೂ ಸಹ ಈ ಪ್ರಕರಣದ ನಿಖರ ಕಾರಣ ತನಿಖೆಯಿಂದ ಅಷ್ಟೆ ಹೊರಬರಬೇಕಿದೆ‌

ಪೊಲೀಸರು ಘಟನೆ ಹೇಗಾಯಿತು ಎಂಬುದರ ಬಗ್ಗೆ ಕೂಲಂಕುಷ ತನಿಖೆ ಕೈಗೊಂಡಿದ್ದಾರೆ. ತನಿಖೆಯ ನಂತರ ಕೊಲೆ ಮಾಡಿ, ಆತಹತ್ಯೆ ಮಾಡಿಕೊಂಡಿರಬಹುದೋ ಅಥವಾ ಬೇರೆ ಯಾರಾದರೋ ಇವರಿಬ್ಬರನ್ನೂ ಗುಂಡು ಹಾರಿಸಿ ಕೊಲೆ ಮಾಡಿದ್ದಾರೋ ಎಂಬುದು ತಿಳಿದುಬರಲಿದೆ.

RELATED ARTICLES

Latest News