Friday, May 3, 2024
Homeರಾಜ್ಯನೇಹಾ ಕೊಲೆ ಖಂಡಿಸಿ ಹುಬ್ಬಳ್ಳಿಯಲ್ಲಿ ನಿಲ್ಲದ ಆಕ್ರೋಶ, ರಾಕ್ಷಸ ಫಯಾಜ್‍ ಗಲ್ಲುಶಿಕ್ಷೆಗೆ ಒತ್ತಾಯ

ನೇಹಾ ಕೊಲೆ ಖಂಡಿಸಿ ಹುಬ್ಬಳ್ಳಿಯಲ್ಲಿ ನಿಲ್ಲದ ಆಕ್ರೋಶ, ರಾಕ್ಷಸ ಫಯಾಜ್‍ ಗಲ್ಲುಶಿಕ್ಷೆಗೆ ಒತ್ತಾಯ

ಹುಬ್ಬಳ್ಳಿ,ಏ.20- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ನಿರಂಜನ ಅವರ ಪುತ್ರಿ ನೇಹಾ ಹಿರೇಮಠ ಕೊಲೆ ಖಂಡಿಸಿ ಎಬಿವಿಪಿ, ವಿವಿಧ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ.

ಕೊಲೆ ಆರೋಪಿ ಫಯಾಜ್‍ನನ್ನು ಗಲ್ಲಿಗೇರಿಸಬೇಕೆಂಬ ಆಕ್ರೋಶ ಎಲ್ಲೆಡೆ ಭುಗಿಲೆದ್ದಿದೆ. ರಾಜಧಾನಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು ಸೇರಿದಂತೆ ಎಲ್ಲೆಡೆ ಪ್ರತಿಭಟನೆಗಳು ತೀವ್ರಗೊಂಡಿವೆ.

ಕೊಲೆ ಖಂಡಿಸಿ ನಿನ್ನೆ ಕೂಡ ಹಲವೆಡೆ ಪ್ರತಿಭಟನೆ ನಡೆಸಲಾಯಿತು. ಇಂದು ಪ್ರತಿಭಟನೆ ತೀವ್ರಗೊಂಡಿದ್ದು, ಹುಬ್ಬಳ್ಳಿಯಲ್ಲಿ ಬಂದ್ ಮಾಡಿದರೆ ಬೆಂಗಳೂರಿನಲ್ಲಿ ಎಬಿವಿಪಿ ಕಾರ್ಯಕರ್ತರು ಗೃಹಸಚಿವ ಡಾ.ಜಿ.ಪರಮೇಶ್ವರ್ ಗೃಹಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಅತ್ತ ಹುಬ್ಬಳ್ಳಿಯಲ್ಲಿ ಜಯಕರ್ನಾಟಕ ಸಂಘಟನೆ, ದಲಿತ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆಯಿಂದಲೇ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸಾಂಕೇತಿಕವಾಗಿ ಹುಬ್ಬಳ್ಳಿ ಬಂದ್ ಮಾಡಲಾಗಿದೆ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.

ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಿಂದ ಬಿವಿಬಿ ಕಾಲೇಜುವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳು, ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.ನೇಹಾ ಹತ್ಯೆ ರೀತಿಯಲ್ಲಿ ಹಲವು ಪ್ರಕರಣಗಳು ನಡೆಯುತ್ತಿವೆ. ಇದೊಂದು ಲವ್ ಜಿಹಾದ್ ಪ್ರಕರಣವಾಗಿದೆ. ರಾಜ್ಯಸರ್ಕಾರ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಯ ಕರ್ನಾಟಕ ಸಂಘಟನೆ ಮುಖಂಡ ಸುಧೀರ ಮುಧೋಳ ಹಾಗೂ ಸಂಘ ಸಂಘಟನೆಯ ಮುಖಂಡೆ ಮಧು ಪಟ್ಟಣಶೆಟ್ಟಿ ಮಾತನಾಡಿ, ಕೊಲೆ ಆರೋಪಿ ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಹೊಸೂರು ಸರ್ಕಲ್ ಬಳಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಲಾಯಿತು. ನಗರದ ಬಿವಿಬಿ ಕಾಲೇಜು ಸೇರಿದಂತೆ ವಿವಿಧಡೆ ವಿವಿಧ ಸಂಘಟನೆಗಳು ಪ್ರತಿಭಟನಾ ವೇಳೆ ರಾಜ್ಯ ಸರ್ಕಾರದ ಬೇಜವಾಬ್ದಾರಿಂದಲೇ ಈ ಘಟನೆಯಾಗಿದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಇತ್ತೀಚೆಗೆ ನಡೆದ ಕೊಲೆ ಪ್ರಕರಣಗಳು ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಆಗಿವೆ ಎಂದು ಹೇಳಿದೆ. ವೈಯಕ್ತಿಕ ಕಾರಣದಿಂದ ವಿದ್ಯಾರ್ಥಿನಿ ನೇಹಾ ಹತ್ಯೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಹಾಗೂ ಇದು ಲವ್ ಜೆಹಾದ್ ಅಲ್ಲ, ಇಂತಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಯಿತು.

ಪೊಲೀಸ್ ಅಧಿಕಾರಿ ಜೊತೆಗೆ ಮಾತಿನ ಚಕಮಕಿ :
ಹುಬ್ಬಳ್ಳಿ ಹೊಸೂರು ಕ್ರಾಸ್ ಬಳಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮಾನವ ಸರಪಳಿ ಮಾಡಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದರು. ಇದಕ್ಕೆ ಆಕ್ರೋಶಗೊಂಡ ಕಾರ್ಯಕರ್ತರು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪೊಲೀಸರು, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

RELATED ARTICLES

Latest News