ಬೆಂಗಳೂರು,ಅ.18– ಮುಡಾ ಕಚೇರಿ ಹಾಗೂ ಜಮೀನು ಮಾಲೀಕ ದೇವರಾಜ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಕೇಂದ್ರ ಸರ್ಕಾರ ಅಥವಾ ಬಿಜೆಪಿಯ ಕೈವಾಡ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್ನ ಆರೋಪವನ್ನು ತಳ್ಳಿಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬಾರಿ ದಾಳಿ ನಡೆದಾಗ ಕಾಂಗ್ರೆಸ್ನವರು ಕೇಂದ್ರದ ಮೇಲೆ ದೂರುವುದು ಸರ್ವೇ ಸಾಮಾನ್ಯವಾಗಿದೆ. ಮೈಸೂರಿನ ಮುಡಾ ಕಚೇರಿ ಮತ್ತು ಪ್ರಕರಣದ 4ನೇ ಆರೋಪಿ ದೇವರಾಜ್ ನಿವಾಸದ ಮೇಲೆ ಇಡಿ ದಾಳಿ ನಡೆಸಿರುವುದಕ್ಕೂ ನಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಅಷ್ಟಕ್ಕೂ ಇಡಿಗೆ ದೂರು ಕೊಟ್ಟಿದ್ದು ಬಿಜೆಪಿಯಲ್ಲ. ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು 500 ಪುಟಗಳ ದಾಖಲೆಯನ್ನು ಸಲ್ಲಿಸಿದ್ದರು. ಅಲ್ಲದೆ ಸ್ವತಃ ಇಡಿ ಅಧಿಕಾರಿಗಳು ಅವರಿಂದ ಹೇಳಿಕೆಯನ್ನು ಪಡೆದಿದ್ದರು. ಇದರಲ್ಲಿ ಬಿಜೆಪಿ ಪಾತ್ರ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಇಡಿ ದಾಳಿ ಮಾಡಿರೋದು ಸ್ನೇಹಮಯಿ ಕೃಷ್ಣ ಕೊಟ್ಟಿರುವ ದೂರಿನ ಆಧಾರದಲ್ಲಿ ಸಿದ್ದರಾಮಯ್ಯ ಸೈಟುಗಳಷ್ಟೇ ಅಲ್ಲ 3-4 ಸಾವಿರ ಕೋಟಿ ಅಕ್ರಮವಾಗಿದೆ ಎಂದು ಮರಿಗೌಡ ಅವರೇ ತನಿಖೆಗೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಾದ ನಂತರ ಸ್ನೇಹಮಯಿ ದೂರು ಕೊಟ್ಟಿದ್ದಾರೆ. ಖುದ್ದು ಕಾಂಗ್ರೆಸ್ನವರೇ ಅಕ್ರಮ ಬಗ್ಗೆ ಹೇಳಿದ್ದಾರೆ. ಹೀಗಾಗಿ ಈ ಇಡಿ ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದು ಪುನರುಚ್ಚರಿಸಿದರು.
3-4 ಸಾವಿರ ಕೋಟಿ ಅಕ್ರಮ ಮುಡಾದಲ್ಲಿ ಆಗಿದೆ. ಇಷ್ಟು ಹಣ ಸರ್ಕಾರದ ಖಜಾನೆಗೆ ಬಂದರೆ ಒಳ್ಳೆಯದೇ ಅಲ್ಲವೇ? ನಾವೇನೂ ಇಡಿಗೆ ದೂರು ಕೊಟ್ಟಿಲ್ಲ, ಬಿಜೆಪಿಯವರ್ಯಾರು ದೂರು ಕೊಟ್ಟಿಲ್ಲ ಎಂದು ಅವರು ತಿಳಿಸಿದರು.