ನೆಲಮಂಗಲ, ಏ.28 – ಹೋಟೆಲ್‌ಗೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ ಕಾರ್ಗೊ ಸಂಸ್ಥೆಯೊಂದರ ಮಾಲೀಕರನ್ನು ಅಪಹರಿಸಿ ಹಂತಕರು ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಇಲ್ಲಿ ನಡೆದಿದೆ. ತುಮಕೂರು ಮೂಲದ ದಿಲೀಪ್ ಕೊಲೆಯಾದ ಮಾಲೀಕ.
ತಾಲ್ಲೂಕಿನ ದಾಬಸ್‌ಪೇಟೆಯಲ್ಲಿ ಕಾರ್ಗೊ ಸಂಸ್ಥೆಯನ್ನು ನಡೆಸುತ್ತಿರುವ ದಿಲೀಪ್ ಮೊದಲ ಪತ್ನಿಯನ್ನು ತೊರೆದು ಸೋಲೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಇತ್ತೀಚೆಗೆ ಮನೆ ಮಾಲೀಕನ ಪತ್ನಿ ಅಮೃತ ಅವರ ಪರಿಚಯವಾಗಿದ್ದು, ನಂತರ ಅವರು ತಮ್ಮ ಪತಿಯನ್ನು ತೊರೆದು ದಿಲೀಪ್‌ರೊಡನೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಹಲವರ ದ್ವೇಷ ಬೆಳೆಸಿಕೊಂಡಿದ್ದ ದಿಲೀಪ್ ಗೆ ಹಲವಾರು ಬೆದರಿಕೆ ಕರೆಗಳು ಬರುತ್ತಿತ್ತು. ಎಂದಿನಂತೆ ನೆಲಮಂಗಲದ ಗಾರ್ಡನ್ ಹೋಟೆಲ್‌ನಲ್ಲಿ ಅಮೃತ ಅವರೊಂದಿಗೆ ಊಟ ಮಾಡಲು ಹೋದಾಗ ಸುಮಾರು ಐದಾರು ಜನ ಮಾರಕಾಸ್ತ್ರಗಳನ್ನು ಹಿಡಿದು ನುಗ್ಗಿದ್ದಾರೆ. ನಂತರ ದಿಲೀಪ್‌ನನ್ನು ಅಲ್ಲಿಂದ ಬೆದರಿಸಿ ಕರೆದೊಯ್ದಿದ್ದು, ತುಮಕೂರಿನ ಬಳಿ ಇಂದು ಬೆಳಿಗ್ಗೆ ಆತನ ಶವ ಪತ್ತೆಯಾಗಿದೆ.
ಅಮೃತ ಅವರ ಕುಟುಂಬದವರು ಈ ಕೊಲೆ ಮಾಡಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನೆಲಮಂಗಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.