Wednesday, October 16, 2024
Homeರಾಜ್ಯಮದುವೆಯಾದ ಕೆಲವೇ ಗಂಟೆಗಳಲ್ಲಿ ಬಡಿದಾಟ : ನವಜೋಡಿ ಸಾವು..

ಮದುವೆಯಾದ ಕೆಲವೇ ಗಂಟೆಗಳಲ್ಲಿ ಬಡಿದಾಟ : ನವಜೋಡಿ ಸಾವು..

ಕೆಜಿಎಫ್, ಆ.8- ಸಪ್ತಪದಿ ತುಳಿದ ಕೆಲವೇ ಗಂಟೆಗಳಲ್ಲಿ ನವಜೋಡಿ ಮಾರಕಾಸಗಳಿಂದ ಹೊಡೆದಾಡಿಕೊಂಡು ಇಬ್ಬರೂ ಮೃತಪಟ್ಟಿರುವ ಘಟನೆಯೊಂದು ಅಂಡರ್‍ಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪರಸ್ಪರ ಎರಡೂ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ ಈ ಜೋಡಿ ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಚಂಬರಸನಹಳ್ಳಿಯಲ್ಲಿ ದುರಂತ ಅಂತ್ಯ ಕಂಡಿರುವುದು ಗ್ರಾಮವನ್ನು ಬೆಚ್ಚಿ ಬೀಳಿಸಿದೆ.
ಆಂಧ್ರದ ರಾಯಸಂದ್ರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ, ಆಂಧ್ರಪ್ರದೇಶದ ಶಾಂತಿಪುರಂ ನಿವಾಸಿ ನವೀನ್ ಕುಮಾರ್(30) ಹಾಗೂ ಕೆಜಿಎಫ್ ನ ಬೈನೇಹಳ್ಳಿಯ ನಿವಾಸಿ ನಿಖಿತಾಶ್ರೀ(18) ಹೊಡೆದಾಡಿಕೊಂಡು ಮೃತಪಟ್ಟವರು.

ನಿಖಿತಾಶ್ರೀ ಮನೆಯಲ್ಲಿ ಆಕೆಗೆ ಮದುವೆ ಮಾಡಲು ಪೋಷಕರು ಬ್ರೋಕರ್‍ಗೆ ಹುಡುಗನನ್ನು ತೋರಿಸಲು ಹೇಳಿದ್ದರು. ಅದರಂತೆ ಬ್ರೋಕರ್ ಮೂರು ತಿಂಗಳ ಹಿಂದೆ ನವೀನ್ ಕುಮಾರ್‍ನನ್ನು ಪರಿಚಯಿಸಿ ಮನೆಗೆ ಕರೆಸಿಕೊಂಡು ಮದುವೆ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ನವೀನ್ ಏನನ್ನು ಮಾತನಾಡದೇ ಮೌನವಾಗಿದ್ದ. ಆತನ ಮನೆಯವರಿಂದಲೂ ಮದುವೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ಒಂದೂವರೆ ತಿಂಗಳ ಹಿಂದೆ ಈ ಮದುವೆ ಬೇಡ ಎಂದಿದ್ದರು.

KGF ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ನಿಖಿತಾಶ್ರೀ ಜೊತೆ ಮಾತನಾಡುವ ಸಲುವಾಗಿ ನವೀನ್ ಕುಮಾರ್‍ ಕಾಲೇಜು ಬಳಿ ಹೋಗಿ ಆಕೆಗೆ ಮೊಬೈಲ್ ಕೊಡಿಸಿದ್ದಾನೆ. ಅಂದಿನಿಂದ ಇವರಿಬ್ಬರು ಮೊಬೈಲ್‍ನಲ್ಲಿ ಮಾತುಕತೆ ನಡೆಸುತ್ತಿದ್ದರು.
ಹುಡುಗನ ಮನೆಯವರು ಏಕಾಏಕಿ ಮೂರು ದಿನಗಳ ಹಿಂದೆ ನಿಖಿತಾಶ್ರೀ ಮನೆಗೆ ಮದುವೆ ಮಾತುಕತೆ ನಡೆಸಿ ಸರಳವಾಗಿ ಚಂಬರಸನಹಳ್ಳಿಯ ನವೀನ್ ಕುಮಾರನ ಅಕ್ಕನ ಮನೆಯಲ್ಲಿ ಮದುವೆ ಮಾಡೋಣ ಎಂದು ನಿನ್ನೆಗೆ ದಿನಾಂಕ ಗೊತ್ತು ಮಾಡಿದ್ದರು.

ಅದರಂತೆ ನಿನ್ನೆ ಬೆಳಗ್ಗೆ ನಿಖಿತಾಶ್ರೀ ಹಾಗೂ ನವೀನ್ ಕುಮಾರ್ ಮದುವೆ ನೆರವೇರಿದೆ. ನಂತರ ಗ್ರಾಮದಲ್ಲಿರುವ ವರನ ದೊಡ್ಡಪ್ಪನ ಮನೆಗೆ ವಧು-ವರನನ್ನು ಕರೆದುಕೊಂಡು ಹೋಗಿದ್ದಾರೆ. ಆ ಸಂದರ್ಭದಲ್ಲಿ ವಧು-ವರರಿಬ್ಬರೂ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಆ ವೇಳೆ ನವೀನ್ ಕುಮಾರ್ ಕೈಗೆ ಸಿಕ್ಕಿದ ಮಚ್ಚಿನಿಂದ ನಿಖಿತಾಶ್ರೀ ಮನಬಂದಂತೆ ಹಲ್ಲೆ ನಡೆಸಿ ನಂತರ ಆತನು ಮಚ್ಚಿನಿಂದ ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಕೊಠಡಿಯಲ್ಲಿ ಜೋರಾಗಿ ಕೂಗಾಟ ಕೇಳಿಸಿಕೊಂಡು ಸಂಬಂ„ಕರು ಬಾಗಿಲು ಹೊಡೆದು ನೋಡುವಷ್ಟರಲ್ಲಿ ನಿಖಿತಾಶ್ರೀ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗಮನಿಸಿ ಆಕೆಯನ್ನು ಹಾಗೂ ಗಂಭೀರ ಗಾಯಗೊಂಡಿದ್ದ ನವೀನ್ ಕುಮಾರ್‍ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ನಿಖಿತಾಶ್ರೀ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನವೀನ್ ಕುಮಾರ್ ಇಂದು ಬೆಳಗ್ಗೆ ಎಸ್‍ಎನ್‍ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ನವಜೋಡಿ ಮನೆಯ ಕೊಠಡಿಗೆ ಹೋದ ಕೆಲ ಹೊತ್ತಿನಲ್ಲೇ ಯಾವ ವಿಚಾರಕ್ಕಾಗಿ ಜಗಳ ಮಾಡಿಕೊಂಡರು ಎಂಬುವುದು ನಿಗೂಢವಾಗಿದೆ. ಸ್ಥಳಕ್ಕೆ ಅಂಡರ್‍ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ವಧು-ವರರಿಬ್ಬರು ಸಂತೋಷವಾಗಿದ್ದರು. ನಾವು ಮದುವೆಗೆ ಹೋಗಿದ್ದೆವು. ಅವರು ಹೊಡೆದಾಡಿಕೊಂಡಿರುವುದು ಸುಳ್ಳು. ಇಬ್ಬರನ್ನು ಯಾರೋ ಹೊಡೆದಿರುವ ಅನುಮಾನ ಇದೆ ಎಂದು ನಿಖಿತಾಶ್ರೀ ಅವರ ತಂಗಿ ಅರ್ಚನಾ ಹಾಗೂ ತಾತ ವೆಂಕಟರಮಣಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News