Saturday, July 19, 2025
Homeರಾಜ್ಯತುಮಕೂರಿನಲ್ಲಿ ತ್ಯಾಜ್ಯ ಸಂಗ್ರಹಣೆಗೆ ಸ್ವಿಗ್ಗಿ, ಜುಮೊಟೊ, ಬಿಂಕ್ಲಿಟ್‌ ಮಾದರಿಯ ಹೊಸ ಯೋಜನೆ

ತುಮಕೂರಿನಲ್ಲಿ ತ್ಯಾಜ್ಯ ಸಂಗ್ರಹಣೆಗೆ ಸ್ವಿಗ್ಗಿ, ಜುಮೊಟೊ, ಬಿಂಕ್ಲಿಟ್‌ ಮಾದರಿಯ ಹೊಸ ಯೋಜನೆ

New scheme for waste collection in Tumkur

ತುಮಕೂರು,ಜು.19– ರಾಜಧಾನಿಗೆ ಉಪನಗರದಂತೆ ಬೆಳೆಯುತ್ತಿರುವ ಸಾರ್ಟ್‌ಸಿಟಿ ತುಮಕೂರಿನಲ್ಲೂ ಸಹ ತ್ಯಾಜ್ಯದ ಸಮಸ್ಯೆ ಬಿಗಡಾಯಿಸಿದ್ದು, ಇದಕ್ಕೆ ಮುಕ್ತಿ ನೀಡಲು ಮಹಾನಗರ ಪಾಲಿಕೆ ಸ್ವಿಗ್ಗಿ, ಜುಮೊಟೊ, ಬಿಂಕ್ಲಿಟ್‌ ಮಾದರಿಯಲ್ಲಿ ಮನೆಮನೆ ಕಸ ಸಂಗ್ರಹಿಸಲು ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಏನಿದು ಯೋಜನೆ … :
ಈಗಾಗಲೇ ನಗರವ್ಯಾಪಕವಾಗಿ ವಿಸ್ತರಣೆಯಾಗಿದ್ದು, ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿದೆ. ಅದರಲ್ಲೂ ಕೆಲಸಕ್ಕೆ ಹೋಗುವವರು ಮನೆ ಬಳಿ ಬರುವ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ಪಾಲಿಕೆ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಒಂದು ಬಟನ್‌ ಒತ್ತಿದರೆ ಸಾಕು, ನಿಮ ಮನೆ ಬಳಿಗೆ ಡೆಲಿವರಿ ಬಾಯ್‌್ಸಗಳು ಬಂದು ನಿಮ ಮನೆಯ ಕಸವನ್ನು ಸಂಗ್ರಹಿಸುತ್ತಾರೆ. ಈ ಯೋಜನೆ ಮುಂದಿನ ವಾರ ಕಾರ್ಯರೂಪಕ್ಕೆ ಬರಲಿದೆ.

ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಮೊಬೈಲ್‌ ಆ್ಯಪ್‌ ಕೂಡ ಸಿದ್ಧಪಡಿಸಲಾಗಿದೆ. ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ತ್ಯಾಜ್ಯ ವಿಲೇವಾರಿಗೆ ಬುಕ್‌ ಮಾಡಿಕೊಂಡರೆ ಪಾಲಿಕೆ ಸಿಬ್ಬಂದಿಗಳು ಮನೆ ಬಾಗಿಲಿಗೆ ಬಂದು ತ್ಯಾಜ್ಯ ಸಂಗ್ರಹಿಸುತ್ತಾರೆ. ಇದಕ್ಕಾಗಿ ಈಗಾಗಲೇ ದ್ವಿಚಕ್ರ ವಾಹನಗಳನ್ನು ಕೂಡ ಪಾಲಿಕೆ ಖರೀದಿಸಿದೆ.

ತುಮಕೂರಿನಿಂದ ಮುಂಜಾನೆಯೇ ಬಹಳಷ್ಟು ಮಂದಿ ಕೆಲಸ ಕಾರ್ಯಗಳಿಗಾಗಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ತೆರಳುತ್ತಾರೆ. ಈ ಸಮಯದಲ್ಲಿ ಮನೆಕೆಲಸದ ಜೊತೆಗೆ ತ್ಯಾಜ್ಯ ವಿಲೇವಾರಿ ಕಷ್ಟಸಾಧ್ಯವಾಗಿದೆ. ಮನೆ ಬಳಿ ಬರುವ ಪಾಲಿಕೆಯ ಕಸ ಸಂಗ್ರಹಿಸುವ ಆಟೋಗಳಿಗೆ ತ್ಯಾಜ್ಯ ನೀಡಲು ಸಾಧ್ಯವಾಗುತ್ತಿಲ್ಲ.

ಕೆಲವರು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ತಂದು ರಸ್ತೆಬದಿ ಕಸವನ್ನು ಎಸೆದು ಹೋಗುತ್ತಿದ್ದಾರೆ. ಇದರಿಂದ ಪರಿಸರ ಮಾಲಿನ್ಯ ಹಾಗೂ ಅದರ ಜೊತೆಗೆ ನಗರದ ಸೌಂದರ್ಯವೂ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಆ್ಯಪ್‌ ಆಧಾರಿತ ಕಸ ಸಂಗ್ರಹ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ಮುಂದಾಗಿದ್ದು, ದೇಶದಲ್ಲೇ ಈ ಯೋಜನೆ ಮೊದಲನೆಯದಾಗಿದೆ.

ಮುಂದಿನ ವಾರದಿಂದ ಮನೆಮನೆಗೆ ಬೈಕ್‌ಗಳಲ್ಲಿ ತೆರಳಿ ತ್ಯಾಜ್ಯ ಸಂಗ್ರಹಿಸುವ ಯೋಜನೆ ಕೈಗೊಳ್ಳಲಾಗಿದ್ದು, ಪ್ರಾಯೋಗಿಕವಾಗಿ ಒಂದು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈ ಯೋಜನೆ ಸಮರ್ಪಕವಾಗಿ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ನಗರದ ಎಲ್ಲಾ ವಾರ್ಡ್‌ಗಳಿಗೂ ವಿಸ್ತರಿಸಲಾಗುವುದು. ಸದ್ಯ ಕೆಲದಿನಗಳ ಕಾಲ ತ್ಯಾಜ್ಯವನ್ನು ಉಚಿತವಾಗಿ ಸಂಗ್ರಹಣೆ ಮಾಡಲಾಗುವುದು. ನಂತರ ಸೇವೆಗೆ ಶುಲ್ಕ ವಿಧಿಸಲು ಚಿಂತನೆ ನಡೆದಿದೆ ಎಂದು ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಅವರು ತಿಳಿಸಿದ್ದಾರೆ.

RELATED ARTICLES

Latest News