Sunday, September 8, 2024
Homeಬೆಂಗಳೂರುಬೆಂಗಳೂರಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಹೊಸ ಸಂಚಾರಿ ಪೊಲೀಸ್‌‍ ಠಾಣೆ : ಬಿ.ದಯಾನಂದ

ಬೆಂಗಳೂರಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಹೊಸ ಸಂಚಾರಿ ಪೊಲೀಸ್‌‍ ಠಾಣೆ : ಬಿ.ದಯಾನಂದ

ಬೆಂಗಳೂರು,ಮೇ11- ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಹೊಸ ಸಂಚಾರಿ ಪೊಲೀಸ್‌‍ ಠಾಣೆಗಳನ್ನು ತೆರೆಯಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಪಶ್ಚಿಮ ವಿಭಾಗ( ಸಂಚಾರ) ಪೊಲೀಸ್‌‍ ವತಿಯಿಂದ ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿನ ಜಲರಾಮ್‌ ಭವನ್‌ ಕಲ್ಯಾಣ ಮಂಟಪದಲ್ಲಿ ಹಮಿಕೊಂಡಿದ್ದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಜ್ಞಾನಭಾರತಿ ಮತ್ತು ಚಿಕ್ಕಬಾಣಾವರದಲ್ಲಿ ಈಗಾಗಲೇ ಹೊಸ ಸಂಚಾರಿ ಪೊಲೀಸ್‌‍ ಠಾಣೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ವರ್ಷದಲ್ಲೇ ಶೇಷಾದ್ರಿಪುರಂ, ಜ್ಯೋತಿನಗರ ಮತ್ತು ಸಂಜಯನಗರಗಳಲ್ಲಿ ಹೊಸ ಸಂಚಾರಿ ಪೊಲೀಸ್‌‍ ಠಾಣೆಗಳು ಕಾರ್ಯಾರಂಭವಾಗಲಿವೆ.

ನಗರದಲ್ಲಿ ಕಳೆದ ವರ್ಷ 48 ಸಂಚಾರಿ ಪೊಲೀಸ್‌‍ ಠಾಣೆಗಳಿದ್ದವು. ಈ ವರ್ಷಕ್ಕೆ ಅದು 53ಕ್ಕೆ ಏರಿಕೆಯಾಗಲಿದೆ. 143 ಪೊಲೀಸ್‌‍ ಚೌಕಿಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದ ಆಯುಕ್ತರು, ಜ್ಞಾನಭಾರತಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಹೊಸ 5 ಸಿಗ್ನಲ್‌ಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.

ಸಾರ್ವಜನಿಕರೊಬ್ಬರು ತಮದಲ್ಲದ ವಾಹನಕ್ಕೆ ಸಂಚಾರ ಉಲ್ಲಂಘನೆ ಮಾಡಿರುವ ಫೋಟೋಗಳನ್ನು ಕಳುಹಿಸಲಾಗಿದೆ ಎಂದಾಗ, ಇದಕ್ಕೆ ಉತ್ತರಿಸಿದ ಆಯುಕ್ತರು, ಅಂತಹ ಯಾವುದೇ ನಂಬರ್‌ ಪ್ಲೇಟ್‌ ಬದಲಾವಣೆ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸಿ. ಆ ರೀತಿಯ ಉಲ್ಲಂಘನೆಯಾದ ಪ್ರಕರಣಗಳಲ್ಲಿ ಟ್ರಾಫಿಕ್‌ ದಂಡವನ್ನು ವಜಾ ಮಾಡಲಾಗುವುದು ಎಂದರು.

ವಾಹನಗಳು ಮತ್ತು ವ್ಯಾಪಾರಸ್ಥರು ಫುಟ್‌ಪಾತ್‌ ಮೇಲೆ ಇರುತ್ತಾರೆ ಎಂಬ ದೂರಿಗೆ ಉತ್ತರಿಸಿದ ಆಯುಕ್ತರು, ಈ ಬಗ್ಗೆ ಬೀದಿ ವ್ಯಾಪಾರಿಗಳ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಸಮಸ್ಯೆ ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು. ಜಂಟಿ ಪೊಲೀಸ್‌‍ ಆಯುಕ್ತ ಅನುಚೇತ್‌.ಎಂ.ಎನ್‌ ಮಾತನಾಡಿ, ಬೆಂಗಳೂರು ಇಡೀ ದೇಶದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಅತಿಹೆಚ್ಚು ಖಾಸಗಿ ವಾಹನಗಳನ್ನು ಹೊಂದಿದ್ದು, ಅಪಘಾತಗಳು ಹೆಚ್ಚಾಗುವುದು ಸಹಜ. ಶೇ.75ರಷ್ಟು ಅಪಘಾತಗಳು ದ್ವಿಚಕ್ರ ವಾಹನಗಳಿಂದಲೇ ಆಗುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಇದಕ್ಕೆ ಮುಖ್ಯ ಕಾರಣ ನಾವು ಸಣ್ಣಪುಟ್ಟ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ಆಗಿದೆ.

ಉದಾಹರಣೆಗೆ ಮನೆ ಪಕ್ಕದಲ್ಲೇ ಇರುವ ಅಂಗಡಿಗೆ ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ ಹೆಲೆಟ್‌ ಧರಿಸದೇ ಹೋಗುವುದು ಅಥವಾ ಅರ್ಧ ಹೆಲೆಟ್‌ ಧರಿಸಿ ಹೋಗುವುದರಿಂದ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗುತ್ತಿವೆ. ಪೊಲೀಸರು ಇದ್ದಾರೆ ಎಂದು ಹೆದರದೆ ನಮ ಜೀವ ರಕ್ಷಣೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ.

ರೆಡ್‌ ಸಿಗ್ನಲ್‌ ಇದ್ದಾಗ ವಾಹನ ನಿಲ್ಲಿಸಿ, ಕಾರುಗಳ ಚಾಲಕರು ಮತ್ತು ಪ್ರಯಾಣಿಕರು ಕಡ್ಡಾಯವಾಗಿ ಸೀಟ್‌ ಬೆಲ್ಟ್ ಧರಿಸಿ ವೇಗದ ಮಿತಿಯಲ್ಲಿ ವಾಹನ ಚಲಾಯಿಸಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಉಪಪೊಲೀಸ್‌‍ ಆಯುಕ್ತೆ ಅನಿತಾ.ಬಿ ಹದ್ದಣ್ಣನವರ್‌ ಹಾಗೂ ಪೊಲೀಸ್‌‍ ಅಧಿಕಾರಿಗಳು ಇದ್ದರು.

RELATED ARTICLES

Latest News