ಬೆಂಗಳೂರು,ಡಿ.19- ಹೊಸ ವರ್ಷಾಚರಣೆಗೆ ಮುಂದಿನ ವಾರದೊಳಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಬೇರೆ ಬೇರೆ ಇಲಾಖೆಗಳೊಂದಿಗೆ ಚರ್ಚಿಸಲಾಗಿದೆ. ನಮ್ಮ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮವಾಗಿ ನಿರ್ಧರಿಸಲಾಗುವುದು. ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಈ ಹಿಂದೆ ಯಾವ ರೀತಿಯ ಘಟನೆಗಳು ನಡೆದಿವೆ ಎಂಬುದನ್ನು ಅವಲೋಕಿಸಿ ಅವುಗಳನ್ನು ತಡೆಗಟ್ಟುವುದು ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ಭದ್ರತೆ ಮಾಡಲಾಗುವುದು ಎಂದು ಹೇಳಿದರು.
ಸಂಭ್ರಮಾಚರಣೆಯಲ್ಲಿ ತೊಡಗಿಕೊಳ್ಳುವವರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎರಡು ರೀತಿಯಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ನಗರದಲ್ಲಿ ಎಂದಿನಂತೆ ಎಂಜಿರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಅನೇಕ ಭಾಗಗಳಲ್ಲಿ ಹೊಸ ವರ್ಷಾಚರಣೆಗೆ ಅನುವು ಮಾಡಿಕೊಡಲಾಗುವುದು. ಆರೋಗ್ಯ ಇಲಾಖೆಯ ಜೊತೆಯೂ ಚರ್ಚೆ ನಡೆಸಿ ಅವರು ನೀಡುವ ಮಾರ್ಗಸೂಚಿ ಪ್ರಕಾರವೇ ನಾವು ನಿಬಂಧನೆಗಳನ್ನು ಹಾಕುತ್ತೇವೆ.
ಸಂಸತ್‍ನ ಕಲಾಪಕ್ಕೆ ಅಡ್ಡಿ : ಇಂದು 50 ಮಂದಿ ಸಂಸದರ ಅಮಾನತು
ಇತ್ತೀಚೆಗೆ ಬಂಧಿತನಾಗಿರುವ ಡ್ರಗ್ಸ್ ಪೆಡ್ಲರ್ ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಆತ ಸರಿಯಾಗಿ ವಿಚಾರಣೆಗೆ ಸಹಕರಿಸುತ್ತಿಲ್ಲ. ನಾವು ನಮ್ಮದೇ ರೀತಿಯಲ್ಲಿ ತನಿಖೆ ಮಾಡುತ್ತಿದ್ದು, ಆತನ ಸಂಪರ್ಕದಲ್ಲಿ ಯಾರು ಯಾರು ಇದ್ದಾರೆ ಎಂಬುವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಆಯುಕ್ತರು ತಿಳಿಸಿದ್ದಾರೆ. ಅಕ್ರಮ ಗ್ಯಾಸ್ ಸಿಲಿಂಡರ್ ಅಡ್ಡೆಗಳ ಮೇಲೆ ಕಣ್ಣಿಡಲಾಗಿದೆ. ಈಗಾಗಲೇ 120ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಅಕ್ರಮಕ್ಕೆ ಕಡಿವಾಣ ಹಾಕಲಾಗಿದೆ ಎಂದು ಕಮಿಷನರ್ ದಯಾನಂದ ಅವರು ಹೇಳಿದ್ದಾರೆ.