ಚಿಕ್ಕಮಗಳೂರು, ಮಾ.17- ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ನವದಂಪತಿಗಳು ಜಿಲ್ಲೆಯ ಕಳಸ ಮತ್ತು ಹೊರನಾಡು ಪ್ರವಾಸಿ
ತಾಣಗಳಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ.
ತಮ್ಮ ಖಾಸಗಿ ವಾಹನ ಬಿಟ್ಟು, ಕಳಸ-ಹೊರನಾಡಿನ ಅಂಕು ಡೊಂಕಿನ ರಸ್ತೆಗಳಲ್ಲಿ ಖಾಸಗಿ ಬಸ್ಸಿನಲ್ಲಿ ಸಂಚಾರ ಮಾಡಿ ಮಲೆನಾಡಿನ ಸೌಂದರ್ಯ ಸವಿದರು. ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಾಲಯದ ಧರ್ಮ ಕರ್ತ ಭೀಮೇಶ್ವರ ಜೋಶಿಯವರು ನವದಂಪತಿಗಳಿಗೆ ಆಶೀರ್ವದಿಸಿ ದೇವರ ಸನ್ನಿಧಿಯಲ್ಲಿ ಸನ್ಮಾನಿಸಿದರು.
ದೇವಾಲಯ ದರ್ಶನದ ನಂತರ, ಕಳಸ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಿಗೆ ಬಸ್ ಮೂಲಕ ಭೇಟಿ ನೀಡಿದರು. ಹಸಿರಿನಿಂದ ಕೂಡಿದ ಪರ್ವತ ಪ್ರದೇಶದಲ್ಲಿ ಬಸ್‌ನಲ್ಲಿ ಸಂಚಾರಿಸಿ ವಿಶೇಷ ಅನುಭವ ಪಡೆದರು.
ತೇಜಸ್ವಿ ದಂಪತಿ ತಮ್ಮ ಪ್ರವಾಸದ ಸಮಯದಲ್ಲಿ ಜನ ಸಾಮಾನ್ಯರೊಂದಿಗೆ ಸಂವಾದ ನಡೆಸಿದ್ದು, ಅಪರೂಪಕ್ಕೆ ರಾಜಕೀಯ ನಾಯಕರು ಬಸ್ಸಿನಲ್ಲಿ ಪ್ರಯಾಣ ನಡೆಸಿದ್ದು
ಸ್ಥಳೀಯರ ಕುತೂಹಲಕ್ಕೂ ಕಾರಣವಾಯಿತು.