Friday, November 22, 2024
Homeರಾಜ್ಯರಾಮೇಶ್ವರಂ ಕೆಫೆ ಸ್ಫೋಟಿಸಲು ಕೇವಲ 5 ಸಾವಿರದಲ್ಲಿ ಬಾಂಬ್ ತಯಾರಿಸಿದ್ದ ಉಗ್ರರು

ರಾಮೇಶ್ವರಂ ಕೆಫೆ ಸ್ಫೋಟಿಸಲು ಕೇವಲ 5 ಸಾವಿರದಲ್ಲಿ ಬಾಂಬ್ ತಯಾರಿಸಿದ್ದ ಉಗ್ರರು

ಬೆಗಳೂರು, ಮಾ.30- ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಿದ ಬಾಂಬ್ ತಯಾರಿಸಲು ದುಷ್ಕರ್ಮಿಗಳು ಸುಮಾರು 2 ತಿಂಗಳು ಸಮಯ ತೆಗೆದುಕೊಂಡಿದ್ದರು ಎಂಬುದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.ಈ ಶಂಕಿತ ಉಗ್ರರು ಬಾಂಬ್ ತಯಾರಿಸಲು ಬೇಕಾದ ಕೆಲವು ಕಚ್ಚಾವಸ್ತುಗಳನ್ನು ಆನ್ಲೈನ್ ಮೂಲಕ ಹಾಗೂ ಮತ್ತೆ ಕೆಲವು ಸಾಮಗ್ರಿಗಳನ್ನು ವಿವಿಧ ಅಂಗಡಿಗಳಲ್ಲಿ ಖರೀದಿಸಿರುವುದು ಗೊತ್ತಾಗಿದೆ.

ಶಂಕಿತ ಉಗ್ರರು ಆನ್ಲೈನ್ನಲ್ಲಿ ಡೆಟೋನೇಟರ್, ಬ್ಯಾಟರಿ, ಟೈಮರ್, ರಂಜಕ ಹಾಗೂ ಅಂಗಡಿಗಳಲ್ಲಿ ನಟ್, ಬೋಲ್ಟ್, ಕೆಲವು ವೈರುಗಳನ್ನು ಖರೀದಿಸಿರುವುದನ್ನು ಎನ್ಐಎ ಪತ್ತೆಹಚ್ಚಿದೆ.ಕೆಫೆ ಸ್ಫೋಟದ ಬಗ್ಗೆ ಎನ್ಐಎ ಈಗಾಗಲೇ ಬಂಧಿಸಿರುವ ಮುಜಾಮಿಲ್ ಶರೀಫ್ ಈ ಎಲ್ಲಾ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಿ ಬಾಂಬ್ ತಯಾರಿಸುತ್ತಿದ್ದ ಅಬ್ದುಲ್ ಮತಿನ್ ತಾಹ ಹಾಗೂ ಪ್ರಮುಖ ಆರೋಪಿ ಮುಸಾವೀರ್ಗೆ ನೀಡುತ್ತಿದ್ದನು ಎಂಬುದು ಎನ್ಐಎ ತನಿಖೆಯಿಂದ ಗೊತ್ತಾಗಿದೆ.

ಆನ್ಲೈನ್ ಹಾಗೂ ಅಂಗಡಿಗಳಲ್ಲಿ ಖರೀದಿಸಿದ ಈ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ, ಶಂಕಿತ ಉಗ್ರರು ನಗರ ಹೊರವಲಯದಲ್ಲಿ ಬಾಂಬ್ ಸಿದ್ಧ ಪಡಿಸಿದ್ದರು ಎಂಬುದನ್ನು ಎನ್ಐಎ ಪತ್ತೆ ಹಚ್ಚಿದೆ.ಈ ಬಾಂಬ್ ತಯಾರಿಸಲು ಶಂಕಿತ ಉಗ್ರರು ಕೇವಲ ಐದರಿಂದ ಆರು ಸಾವಿರ ರೂ. ವೆಚ್ಚ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಕೆಫೆಯಲ್ಲಿ ಮಾ.1ರಂದು ಬಾಂಬ್ ಸ್ಫೋಟದ ನಂತರ ತನಿಖೆ ಕೈಗೊಂಡ ಎನ್ಐಎ ಅಧಿಕಾರಿಗಳು ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದೊರೆತ ಮಾಹಿತಿಯಿಂದ ಈ ಸ್ಫೋಟದ ಹಿಂದೆ ಶಂಕಿತ ಉಗ್ರರಾದ ಅಬ್ದುಲ್ ಮತಿನ್ ತಾಹ ಮತ್ತು ಮುಸಾವೀರ್ ಇರುವುದು ಗೊತ್ತಾಗಿತ್ತು.

ಅದರ ಜಾಡು ಹಿಡಿದು ಎನ್ಐಎ ಅಧಿಕಾರಿಗಳು ತನಿಖೆ ತೀವ್ರ ಗೊಳಿಸಿ ನಗರದ ಐದು ಕಡೆ, ಚೆನ್ನೈ, ತೀರ್ಥಹಳ್ಳಿ, ಭಟ್ಕಳದಲ್ಲಿ ದಾಳಿ ಮಾಡಿ ಹಲವರನ್ನು ವಿಚಾರಣೆಗೆ ಒಳಪಡಿಸಿ, ಅವರು ನೀಡಿದ ಮಾಹಿತಿ ಮೇರೆಗೆ ಮುಜಾಮಿಲ್ ಶರೀಫ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅಬ್ದುಲ್ ಮತಿನ್ ತಾಹ ಮತ್ತು ಮುಸಾವೀರ್ ಕೆಫೆ ಸ್ಫೋಟದ ರುವಾರಿಗಳು ಎಂಬುದು ಮತ್ತಷ್ಟು ಖಚಿತವಾಗಿದೆ.

ಈ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ಈ ಇಬ್ಬರು ಶಂಕಿತ ಉಗ್ರರ ಛಾಯಾಚಿತ್ರಗಳನ್ನು ಎನ್ಐಎ ಬಿಡುಗಡೆ ಮಾಡಿ ಇವರುಗಳ ಸುಳಿವು ನೀಡಿದವರಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿ, ಸಾರ್ವಜನಿಕರು ಪತ್ತೆಗೆ ಸಹಕರಿಸುವಂತೆ ಮನವಿ ಮಾಡಿದೆ. ಹಿಂದುವಿನಂತೆ ವೇಶ ಬದಲಿಸಿಕೊಂಡು, ಈ ಇಬ್ಬರು ಹಿಂದೂ ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ ಎಂಬುದು ಗೊತ್ತಾಗಿದ್ದು, ಎನ್ಐಎ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಹಗಲಿರುಳು ಸೋಟದ ಈ ಇಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕಾಗಿ ಶ್ರಮಿಸುತ್ತಿದ್ದಾರೆ.

RELATED ARTICLES

Latest News