ನವದೆಹಲಿ,ಫೆ.1- ಬಡವರು, ಮಹಿಳೆಯರು, ಯುವಕರು ಹಾಗೂ ಅನ್ನದಾತರು ತಮ್ಮ ಬಜೆಟ್‍ನ 4 ಪ್ರಮುಖ ಅಂಶಗಳು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೇಶಕ್ಕೆ ಹೊಸ ದಿಕ್ಕು ಮತ್ತು ಭರವಸೆ ಸಿಕ್ಕಿದೆ, ಎಲ್ಲರಿಗೂ ಮನೆ, ಎಲ್ಲರಿಗೂ ನೀರು, ಪ್ರತಿ ಮನೆಗೆ ವಿದ್ಯುತ್ಗೆ ಒತ್ತು ಕೊಡಲಾಗುತ್ತಿದೆ.
ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪುತ್ತಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಬಜೆಟ್‍ನ ಮೊದಲ ಆಧಾರ ಸ್ತಂಭವಾಗಿರುವ ಬಡವರ ಅಭಿವೃದ್ಧಿಗೆ ಕೇಂದ್ರ ಹಣಕಾಸು ಸಚಿವರು ಹೆಚ್ಚಿನ ಒತ್ತು ನೀಡಿದ್ದು. ಬಹಳಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ.
11.8 ಕೋಟಿ ರೈತರಿಗೆ ಪಿಎಂ ಕಿಸಾನ್ ಯೋಜನೆ ನೆರವು
ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಆರ್ಥಿಕವಾಗಿ ಬಲಿಷ್ಠವಾಗುತ್ತಿದೆ. ಕೊರೋನಾದಂತಹ ಶತಮಾನದ ಬಿಕ್ಕಟ್ಟಿನ ಮಧ್ಯೆಯೂ ಭಾರತವು ಸಕಲ ಕ್ಷೇತ್ರಗಳಲ್ಲಿ ಏಳಿಗೆ ಹೊಂದುತ್ತಿದೆ. ಉಜ್ವಲ ಭವಿಷ್ಯದತ್ತ ಭಾರತ ಹೆಜ್ಜೆ ಹಾಕುತ್ತಿದೆ. ಸುಭದ್ರ ಸರ್ಕಾರಕ್ಕೆ ಜನ ಬಹುಮತ ನೀಡಿದ್ದರಿಂದ ಇದೆಲ್ಲ ಸಾಕಾರವಾಗುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಮಂತ್ರವು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ಬಜೆಟ್ ಭಾಷಣದ ಆರಂಭದಲ್ಲಿ ಕೇಂದ್ರ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಪ್ರಗತಿಯನ್ನು ನಿರ್ಮಲಾ ಸೀತಾರಾನ್ ಅವರು ವಿವರಿಸಿದರು.