ಬೆಂಗಳೂರು,ಅ.24- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣದಲ್ಲಿ ಯಾವುದೇ ಅಸಮಾಧಾನಗಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ದೊಡ್ಡದಾಗಿ ಆಂತರಿಕ ಸಮೀಕ್ಷೆ ನಡೆಯುತ್ತಿದೆ. ಬಹುತೇಕ ಮಧ್ಯಾಹ್ನದ ಒಳಗೆ ಅಖೈರುಗೊಳ್ಳಬಹುದು ಎಂದರು.
ನಾನಾ ರೀತಿಯ ಅಭಿಪ್ರಾಯಗಳು ಕೇಳಿಬಂದಿವೆ. ರಾಜಕೀಯವಾಗಿ ಕಾಂಗ್ರೆಸ್‌ಗಾಗುವ ಲಾಭಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಅದನ್ನು ಆಧರಿಸಿ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು. ಡಿ.ಕೆ.ಸುರೇಶ್ರವರೇ ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬೇಕು ಎಂದು ಹೇಳುತ್ತಿದ್ದರು. ಆದರೆ ಯಾವುದೇ ಅಸಮಾಧಾನಗಳಿಲ್ಲ. ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಡಿ.ಕೆ.ಸುರೇಶ್‌ರವರೇ ನೋಡಿಕೊಳ್ಳುತ್ತಾರೆ.
ಸಿ.ಪಿ.ಯೋಗೇಶ್ವರ್‌ರವರು ಕಾಂಗ್ರೆಸ್‌ಗೆ ಬರುವ ಮುನ್ನ ಡಿ.ಕೆ.ಸುರೇಶ್ ಅವರನ್ನೇ ಸಂಪರ್ಕ ಮಾಡಿದ್ದು, ನಂತರ ನನ್ನ ಬಳಿ ಬಂದರು ಎಂದರು. ಅಭ್ಯರ್ಥಿಯ ಆಯ್ಕೆಯಾಗಿದೆ. ಇಂದು ನಾಮಪತ್ರ ಸಲ್ಲಿಕೆಯಾಗಲಿದೆ. ನಾನು ಮತ್ತು ಮುಖ್ಯಮಂತ್ರಿಯವರು ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು