ಬೆಂಗಳೂರು,ಆ.23-ಯಾವುದೇ ಕಾರಣಕ್ಕೂ ಬಹುತ ಹೊಂದಿರುವ ಕಾಂಗ್ರೆಸ್ ಸರ್ಕಾರವನ್ನು ನಾವು ಅಸ್ಥಿರಗೊಳಿಸುವ ಪ್ರಯತ್ನ ಕೈ ಹಾಕುವುದಿಲ್ಲ. ಆದರೆ ಅವರ ಆಂತರಿಕ ಕಚ್ಚಾಟದಿಂದ ಅಸ್ಥಿರಗೊಂಡರೆ ನಾವೇನು ಮಾಡಲು ಸಾಧ್ಯವೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಕಾಂಗ್ರೆಸ್ಗೆ ಐದು ವರ್ಷ ಆಡಳಿತ ನಡೆಸಲು 136 ಸ್ಥಾನಗಳನ್ನು ನೀಡಿದ್ದಾರೆ. ಬಹುಮತ ಹೊಂದಿರುವ ಸರ್ಕಾರವನ್ನು ಅಭದ್ರಗೊಳಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಿದರು.ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಯಾರೂ ಕೂಡ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಕೈ ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತಮ ತಪ್ಪುಗಳನ್ನು ಮುಚ್ಚಿ ಹಾಕಿಕೊಳ್ಳಲು ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ವಾಸ್ತವವಾಗಿ ಕುರ್ಚಿ ಕಳೆದುಕೊಳ್ಳುವ ಭೀತಿ ಸಿಎಂಗೆ ಎದುರಾಗಿದೆ. ಹೀಗಾಗಿ ತಮಗೆ ಬೆಂಬಲ ನೀಡಬೇಕೆಂದು ಶಾಸಕರಿಗೆ ಬಲವಂತವಾಗಿ ಒತ್ತಡ ಹಾಕುತ್ತಿದ್ದಾರೆ. ಇದು ವಾಸ್ತವವೂ ಹೌದು ಎಂದು ತಿಳಿಸಿದರು.
ನಿಮ ಮನೆಯನ್ನು ನೀವು ಮೊದಲು ಸರಿ ಮಾಡಿಕೊಳ್ಳಿ, ಬೇರೆಯವರ ಮೇಲೆ ಆರೋಪ ಬಿಡಿ. ಬಿಜೆಪಿ ಯಾವ ಕಾರಣಕ್ಕೂ ಈ ಸರ್ಕಾರ ತೆಗೆಯುವ ಉದ್ದೇಶ ಹೊಂದಿಲ್ಲ. ಸಿಎಂ ಮೇಲೆ ಆರೋಪ ಬಂದಿದೆ. ಅವರು ಶುದ್ಧರಾಗಿ ಹೊರಗೆ ಬರಲಿ. ಪಾರದರ್ಶಕ ತನಿಖೆ ನಡೆಯಲಿ ಎಂದರು.
ಸಿದ್ದರಾಮಯ್ಯ ಮೇಲೆ ನಮಗೇನೂ ಕೋಪ ಇಲ್ಲ. ಬಿಜೆಪಿ ಸರ್ಕಾರ ಅಸ್ಥಿರಗೊಳ್ಳುತ್ತಿಲ್ಲ. ಜನಾದೇಶ ನಮಗೆ ವಿರೋಧ ಪಕ್ಷದ ಸ್ಥಾನ ಕೊಟ್ಟಿದೆ. ಆ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ 58 ವರ್ಷ ಕಾಲ ದೇಶದಲ್ಲಿ ಆಡಳಿತ ಮಾಡಿದ್ದು, 92 ಬಾರಿ ಗಟ್ಟಿಮುಟ್ಟಾದ ಚುನಾಯಿತ ಸರ್ಕಾರಗಳನ್ನು ರಾಜ್ಯಪಾಲರ ಮೂಲಕ ಉರುಳಿಸಿದೆ. ಇಂಡಿಯಾ ಒಕ್ಕೂಟದಲ್ಲಿರುವ ಅನೇಕ ಪಕ್ಷಗಳ ಸರ್ಕಾರಗಳನ್ನು ಇವರೇ ತೆಗೆದಿದ್ದಾರೆ. ಇವರು ಈಗ ನಮಗೆ ರಾಜ್ಯಪಾಲರ ವಿಚಾರದಲ್ಲಿ ಬೋಧನೆ ಮಾಡುತ್ತಿರುವುದು ಬಹಳ ದೊಡ್ಡ ಆಶ್ಚರ್ಯ ಎಂದು ಅವರು ಠಕ್ಕರ್ ನೀಡಿದರು.