Tuesday, September 2, 2025
Homeರಾಜ್ಯಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸುವ ಅಗತ್ಯವಿಲ್ಲ : ಪರಮೇಶ್ವರ್

ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸುವ ಅಗತ್ಯವಿಲ್ಲ : ಪರಮೇಶ್ವರ್

No need to hand over Dharmasthala case to NIA: Parameshwar

ಬೆಂಗಳೂರು, ಸೆ.2– ಧರ್ಮಸ್ಥಳದ ವಿಚಾರದಲ್ಲಿ ನಡೆಯುತ್ತಿರುವ ಎಸ್‌‍ಐಟಿ ತನಿಖೆಯಲ್ಲಿ ಯಾವುದೇ ಲೋಪಗಳಿಲ್ಲ. ಹೀಗಾಗಿ ಎನ್‌ಐಎ ತನಿಖೆಗೆ ವಹಿಸುವ ಅಗತ್ಯ ಇಲ್ಲ. ಬಿಜೆಪಿಯವರು ಎಸ್‌‍ಐಟಿ ತನಿಖೆಗೆ ತೊಂದರೆ ಮಾಡುವ ಉದ್ದೇಶ ಹೊಂದಿರುವಂತೆ ಕಂಡು ಬರುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವ ಅಗತ್ಯ ಇಲ್ಲ ಎಂದು ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದೇನೆ. ಬಿಜೆಪಿಯವರು ಅನೇಕ ರೀತಿಯಲ್ಲಿ ಒತ್ತಾಯ ಮಾಡುವ ಮೂಲಕ ಸ್ವರೂಪ ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಾರಿ ನಿರ್ದೇಶನಾಲಯ ಫೇಮಾ ಮತ್ತು ಇತರ ಕಾಯ್ದೆಗಳ ಅಡಿ ತನಿಖೆ ಆರಂಭಿಸಿ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರಕ್ಕೆ ಎನ್‌ಜಿಓ ಹಣ ಬಳಕೆಯಾಗಿರುವ ಬಗ್ಗೆ ವಿಚಾರಣೆ ನಡೆಸುವುದಾದರೆ ನಮ ಅಭ್ಯಂತ್ರವಿಲ್ಲ. ಅವರು ಹಣಕಾಸಿನ ವಿಚಾರಗಳ ಕುರಿತು ತನಿಖೆ ಮಾಡುತ್ತಾರೆ. ಎಸ್‌‍ಐಟಿ ತನ್ನ ಪಾಲಿನ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಚಿನ್ನಯ್ಯ ಅವರು ನಿಯಮ 164ರ ಅಡಿ ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆಗೆ ಸೀಮಿತವಾಗಿ ತನಿಖೆ ನಡೆಸುತ್ತಿದೆ ಎಂದರು.

ಧರ್ಮಸ್ಥಳದ ವಿರುದ್ಧ ಬಿಜೆಪಿ ಷಡ್ಯಂತ್ರ ಮಾಡಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿರುವುದು ನನಗೆ ಗೊತ್ತಿಲ್ಲ. ಅವರಿಗೆ ಬೇರೆ ರೀತಿಯ ಮಾಹಿತಿಗಳು ಇರಬಹುದು. ನಾನು ಜವಾಬ್ದಾರಿಯುತ ಸಚಿವನಾಗಿ ತನಿಖೆ ನಡೆಯುವ ಸಂದರ್ಭದಲ್ಲಿ ಬೇರೆ ರೀತಿಯ ಹೇಳಿಕೆ ನೀಡಲು ಬಯಸುವುದಿಲ್ಲ. ಬಿಜೆಪಿಯವರು ತನಿಖೆಗೆ ತೊಂದರೆ ಮಾಡಲು ನಾನಾ ರೀತಿಯ ಪ್ರಯತ್ನ ಮಾಡುತ್ತಿರುವಂತಿದೆ ಎಂದರು.

ಸೌಜನ್ಯ ಅವರ ಪ್ರಕರಣದಲ್ಲಿ ಬಿಜೆಪಿಯವರ ನಿಲುವುಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಸೌಜನ್ಯ ಅಪಹರಣವಾಗಿರುವುದನ್ನು ಕಣ್ಣಾರೆ ನೋಡಿದ್ದಾಗಿ, ಮಹಿಳೆ ಹೇಳಿಕೆ ನೀಡಿ ರುವುದನ್ನೂ ಎಸ್‌‍ಐಟಿ ಗಮನಿಸುತ್ತದೆ ಎಂದರು.

ಎಸ್‌‍ಐಟಿ ಮುಖ್ಯಸ್ಥ ಪ್ರಣಬ್‌ ಮೊಹಾಂತಿ ಇಂದು ತಮನ್ನು ಭೇಟಿ ಮಾಡಿದ್ದರು. ಆದರೆ ಅವರು ಕೇವಲ ಎಸ್‌‍ಐಟಿ ವಿಚಾರಕ್ಕೆ ಮಾತ್ರ ಚರ್ಚೆ ಮಾಡಲು ಬರುವುದಿಲ್ಲ. ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಆಗಿರುವ ಅವರಿಗೆ ಸರ್ಕಾರ ಬೇರೆ ಬೇರೆ ಜವಾಬ್ದಾರಿಗಳನ್ನು ನೀಡಿರುತ್ತದೆ. ಆ ಕುರಿತು ಚರ್ಚೆ ಮಾಡಲು ಪ್ರಣಬ್‌ ಮೊಹಾಂತಿ ಬಂದಿದ್ದರು ಎಂದು ಹೇಳಿದರು.

RELATED ARTICLES

Latest News