Saturday, July 27, 2024
Homeರಾಜಕೀಯ"ಕರ್ನಾಟಕದಿಂದ ಯಾರೂ ಪ್ರಧಾನಿ ಹುದ್ದೆಯ ರೇಸ್‌‍ನಲ್ಲಿಲ್ಲ" : ಸಿಎಂ ಸಿದ್ದರಾಮಯ್ಯ

“ಕರ್ನಾಟಕದಿಂದ ಯಾರೂ ಪ್ರಧಾನಿ ಹುದ್ದೆಯ ರೇಸ್‌‍ನಲ್ಲಿಲ್ಲ” : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ 20- ಕೇಂದ್ರದಲ್ಲಿ ಕಾಂಗ್ರೆಸ್‌‍ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಿಂದ ಪ್ರಧಾನಿ ಹುದ್ದೆಗೆ ಯಾರೂ ಆಕಾಂಕ್ಷಿಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರೆಸ್‌‍ಕ್ಲಬ್‌ನಲ್ಲಿಂದು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಗುಜರಾತಿನ ಮಾದರಿಯನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ದೇಶದ ಪ್ರಧಾನಿಯಾದಂತೆ ಕರ್ನಾಟಕದ ಮಾದರಿಯನ್ನು ಪ್ರಸ್ತಾಪಿಸಿ ರಾಜ್ಯದಿಂದ ಪ್ರಧಾನಿ ಹುದ್ದೆಯ ರೇಸ್‌‍ನಲ್ಲಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಿಂದ ಯಾರೂ ಪ್ರಧಾನಿ ಹುದ್ದೆಯ ರೇಸ್‌‍ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

ತಮ್ಮ 1 ವರ್ಷಗಳ ಸರ್ಕಾರದ ಸಾಧನೆಯೆಂದರೆ ತಕ್ಷಣವೇ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ 2023-24 ರಲ್ಲಿ 36 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ. ಮುಂದಿನ ವರ್ಷಕ್ಕೆ 52 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.

ಶಕ್ತಿ ಯೋಜನೆಯಡಿ 201 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 4.10 ಕೋಟಿ ಫಲಾನುಭವಿಗಳಿಗೆ 5,754 ಕೋಟಿ ರೂ.ಗಳನ್ನು ಬ್ಯಾಂಕ್‌ ಖಾತೆಗೆ ಜಮಾಗೊಳಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್‌ಗಾಗಿ 7,436 ಕೋಟಿ ರೂ. ಖರ್ಚು ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 1.20 ಕೊಟಿ ಯಜಮಾನಿಯರಿಗೆ 20,293 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದ್ದು, ಯುವನಿಧಿಯಡಿ 1,57,255 ನೋಂದಣಿಯಾಗಿದ್ದಾರೆ ಎಂದು ಹೇಳಿದರು.

ಪಂಚಖಾತ್ರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದರ ಜೊತೆಗೆ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಕಳೆದ ಬಜೆಟ್‌ನಲ್ಲಿ 54 ಸಾವಿರ ಕೋಟಿ ರೂ.ಗಳ ಬಂಡವಾಳ ವೆಚ್ಚದ ಬದಲಾಗಿ 56 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ನೀರಾವರಿಗೆ 14,369 ಕೋಟಿ ರೂ.ಗಳ ಬದಲಾಗಿ 18,198 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಶೇ.99.20 ಯಷ್ಟು ಅನುದಾನ ಬಳಕೆಯಾಗಿದೆ.

ರಾಜ್ಯಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ಬಿಜೆಪಿಯವರ ಅಪಪ್ರಚಾರದಲ್ಲಿ ಯಾವುದೇ ಹುರುಳಿಲ್ಲ. ಆರ್ಥಿಕವಾಗಿ ಸಬಲವಾಗಿರುವುದಕ್ಕಾಗಿಯೇ ಪಂಚಖಾತ್ರಿಗಳು ಮತ್ತು ಯೋಜನಾ ವೆಚ್ಚಗಳನ್ನು ಹಿಂದಿನ ಸರ್ಕಾರಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಪರಿಶಿಷ್ಟರ ಬಗ್ಗೆ ಕಾಳಜಿ ವಹಿಸುವ ಪ್ರಧಾನಮಂತ್ರಿಯವರು ದೇಶಾದ್ಯಂತ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಎಸ್‌‍ಇಪಿ ಮತ್ತು ಟಿಎಸ್‌‍ಪಿ ಕಾಯ್ದೆಯನ್ನು ಏಕೆ ಜಾರಿಗೊಳಿಸಲಿಲ್ಲ? ಹಿಂದುಳಿದ ವರ್ಗಗಳ ಮೀಸಲಾತಿಯನ್ನು ತೆಗೆದು ಮುಸ್ಲಿಮರಿಗೆ ನೀಡಲಾಗುತ್ತಿದೆ ಎಂದು ಪ್ರಧಾನಿಯವರು ಅಪ್ಪಟ ಸುಳ್ಳು ಹೇಳುತ್ತಿದ್ದಾರೆ. ಹಿಂದಿನ ಬೊಮಾಯಿ ಅವರ ಸರ್ಕಾರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಸುಪ್ರೀಂಕೋರ್ಟ್‌ನ ವಿಚಾರಣೆ ವೇಳೆ ಯಥಾಸ್ಥಿತಿಯನ್ನು ಮುಂದುವರೆಸುವುದಾಗಿ ಪ್ರಮಾಣ ಪತ್ರ ಸಲ್ಲಿಸಿದೆ. ಈವರೆಗೂ ಅದೇ ವ್ಯವಸ್ಥೆ ಮುಂದುವರೆದಿದೆ ಎಂದರು.

ರಾಜಕೀಯ ಮತ್ತು ಮತಗಳಿಕೆಗೆ ಜನರನ್ನು ದಿಕ್ಕು ತಪ್ಪಿಸುವ ಸತ್ಯಕ್ಕೆ ದೂರವಾದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ಭ್ರಷ್ಟಾಚಾರ ನಿರ್ಮೂಲನೆಗೆ ತಮ ಸರ್ಕಾರ ಬದ್ಧವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್‌‍ಐ ನೇಮಕಾತಿ ಅಕ್ರಮ ಕೋವಿಡ್‌ ಸಂದರ್ಭದಲ್ಲಿ ನಡೆದ ಖರೀದಿ ಅವ್ಯವಹಾರ ಶೇ.40 ರಷ್ಟು ಕಮಿಷನ್‌ ದೂರ ಸೇರಿದಂತೆ ಹಲವು ದೂರುಗಳ ತನಿಖೆಗೆ ವಿಚಾರಣಾ ಆಯೋಗ ರಚಿಸಲಾಗಿದೆ. ಪಿಎಸ್‌‍ಐ ಹಗರಣದ ವರದಿ ಬಂದಿದ್ದು, ಉಳಿದೆರೆಡು ಹಗರಣಗಳ ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಹುಬ್ಬಳ್ಳಿ ಹಾಗೂ ಕೊಡಗಿನಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಂದೆ ಇಂತಹ ಘಟನೆಗಳು ಮರುಕಳುಸದಂತೆ ಎಚ್ಚರಿಕೆ ವಹಿಸಲಾಗಿದೆ. ಹುಬ್ಬಳ್ಳಿ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗದ ಡಿಸಿಪಿಗಳು, ಡಿವೈಎಸ್ಪಿಗಳು ಹಾಗೂ ಇನ್ಸ್ ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ವಿವರಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಲಾಗಿದೆ. ಅದರ ಅನುಷ್ಠಾನದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಅದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಒಂದು ವೇಳೆ ತೊಂದರೆಯಾದರೆ ಅದನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಇಡಬ್ಲ್ಯೂಎಸ್‌‍ ಜಾರಿ ಬಳಿಕ ಎಲ್ಲಾ ಸಮುದಾಯಗಳಿಗೂ ಮೀಸಲಾತಿ ದೊರೆಯುತ್ತಿದೆ. ಈ ಹಂತದಲ್ಲಿ ಯಾರೂ ಕೂಡಾ ಮೀಸಲಾತಿ ವಿರುದ್ಧವಾಗಿ ಮಾತನಾಡುವುದು ಅರ್ಥಹೀನ ಎಂದು ಹೇಳಿದರು.ಪೆನ್‌ಡ್ರೈವ್‌ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಇದರಲ್ಲಿ ಯಾವುದೇ ರಾಜಕೀಯ ಷಡ್ಯಂತ್ರವಿಲ್ಲ. ಪೆನ್‌ಡ್ರೈವ್‌ ಇದೆ ಎಂದು ದೇವರಾಜೇಗೌಡ ವರ್ಷದ ಹಿಂದೆಯೇ ಹೇಳಿಕೊಂಡಿದ್ದರು. ವಿಡಿಯೋಗಳು ಬಹಿರಂಗಗೊಳ್ಳುತ್ತಿದ್ದಂತೆ ಪ್ರಜ್ವಲ್‌ ರೇವಣ್ಣ ದೇಶ ಬಿಟ್ಟು ಪರಾರಿಯಾದರು. ಇದರಲ್ಲಿ ಷಡ್ಯಂತ್ರ ಇದೆ ಎನ್ನುವುದೇ ಆದರೆ ಜನತಾದಳದವರು ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದೇಕೆ? ವಿಷಯ ಗೊತ್ತಿದ್ದೂ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಿದ್ದೇಕೆ? ಅವರ ಪರವಾಗಿ ಪ್ರಚಾರ ಮಾಡಿದ್ದೇಕೆ? ಎಂದು ಹಲವು ಪ್ರಶ್ನೆಗಳನ್ನು ಮುಂದಿಟ್ಟ ಮುಖ್ಯಮಂತ್ರಿಗಳು, ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಮಾಡಲಾಗುತ್ತಿರುವ ಆಡಿಯೋ ಆರೋಪ ಸೇರಿದಂತೆ ಯಾವುದಕ್ಕೂ ಸಾಕ್ಷ್ಯಗಳಿಲ್ಲ ಎಂದು ಸಮರ್ಥಿಸಿಕೊಂಡರು.

ಬರ ಪರಿಹಾರ ಪಾವತಿ ವಿಷಯದಲ್ಲಿ ಬಿಜೆಪಿ ನಾಯಕರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದರು. ಕಾನೂನು ಸಂಘರ್ಷದ ಮೂಲಕ ಪರಿಹಾರ ಪಡೆದುಕೊಳ್ಳಲಾಗಿದೆ. ರೈತರಿಗೆ ವಿತರಿಸುತ್ತಿದ್ದೇವೆ. ಮುಂದಿನ ಹಂತದಲ್ಲೂ ಕಾನೂನು ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಇಂಡಿಯಾ ಮೈತ್ರಿಕೂಟದ ಲೇವಡಿ ಮಾಡುವ ಪ್ರಧಾನಿಯವರು ಎನ್‌ಡಿಎ ಮೈತ್ರಿಕೂಟ ಮಾಡಿಕೊಂಡಿದ್ದೇಕೆ? ಗೆಲ್ಲುವ ವಿಶ್ವಾಸವಿದ್ದಿದ್ದರೆ ಏಕಾಂಗಿಯಾಗಿಯೇ ಸ್ಪರ್ಧಿಸಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯವರ ಕಾರ್ಯದರ್ಶಿಗಳಾದ ಕೆ.ಗೋವಿಂದರಾಜು, ನಜೀರ್‌ ಅಹಮದ್‌, ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್‌, ಪ್ರೆಸ್‌‍ಕ್ಲಬ್‌ ಅಧ್ಯಕ್ಷ ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಬಿ.ಟಿ.ಮಲ್ಲಪ್ಪ, ಉಪಾಧ್ಯಕ್ಷ ಆನಂದ್‌ ಬೈದನನೆ, ಕಾರ್ಯದರ್ಶಿ ದೊಡ್ಡಬೊಮಯ್ಯ, ಖಜಾಂಚಿ ಮೋಹನ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News