ಬೆಂಗಳೂರು,ಏ.22- ನೇಹಾ ಕೊಲೆ ಆರೋಪಿ ಫಯಾಜ್ನನ್ನು ಒಂದು ಗಂಟೆಯೊಳಗಾಗಿಯೇ ಬಂಧಿಸಿ, ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಕಾನೂನು ಪಾಲನೆ ವಿಷಯದಲ್ಲಿ ಯಾವುದೇ ರಿಯಾಯಿತಿ ತೋರಿಸಿಲ್ಲ. ಆದರೂ ಬಿಜೆಪಿಯವರು ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನೇಹಾಗಾಗಿ ಮತ ನೀಡಿ ಎಂದು ಪ್ರಚಾರ ನಡೆಸುತ್ತಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೇಹಾ ಮನೆಗೆ ಬಂದು ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೇಹಾಗಾಗಿ ಮತ ಹಾಕಿ ಎಂದು ಕೇಳುತ್ತಿರುವುದರ ಅರ್ಥವೇನು? ಇದು ಸಂಪೂರ್ಣವಾಗಿ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಈ ಕಾರಣಕ್ಕಾಗಿಯೇ ತಾವು ಹೆಚ್ಚು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಹೇಳಿದರು.
ತಮ್ಮ ಹಾಗೂ ಮುಖ್ಯಮಂತ್ರಿ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ. ಸಂತೋಷ. ಅದಕ್ಕೆ ತಕರಾರಿಲ್ಲ. ಆದರೆ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಹಿಂದೂ, ಮುಸಲ್ಮಾನ, ಕ್ರೈಸ್ತ ಸೇರಿದಂತೆ ಯಾವುದೇ ಧರ್ಮಜಾತಿಯವರಾಗಿದ್ದರೂ ಕಾನೂನು ಪ್ರಕಾರವೇ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನನ್ನು ಬಿಟ್ಟು ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದರು. ಆರೋಪಿ ಮುಸಲ್ಮಾನ್ ಆಗಿರುವುದರಿಂದ ರಕ್ಷಣೆ ಮಾಡುತ್ತಿದ್ದಾರೆ ಎಂಬ ಟೀಕೆಗಳಿವೆ.
ನಮಗೆ ಅದರ ಅಗತ್ಯವೇನಿದೆ? ಆತ ಒಬ್ಬ ವ್ಯಕ್ತಿ, ಕೊಲೆ ಮಾಡಿದ್ದಾನೆ. ಅದಕ್ಕಾಗಿ ಶಿಕ್ಷೆಯಾಗಬೇಕಿದೆ. ಅದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆಯಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಘಟನೆ ನಡೆದ ಒಂದು ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಜರುಗಿಸಿದ್ದಾರೆ.
ಆರೋಪಿಯ ಹಿಂದೆ ಬೇರೆಯವರೂ ಇದ್ದಾರೆ ಎಂದು ಹೇಳಲಾಗುತ್ತಿದೆ. ಅದನ್ನೂ ತನಿಖೆ ನಡೆಸಲಾಗುತ್ತಿದೆ ಎಂದರು. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಬಿಐ ಕೂಡ ತನಿಖಾ ಸಂಸ್ಥೆ. ಅಲ್ಲೇನೂ ದೊಡ್ಡ ವ್ಯವಸ್ಥೆಗಳಿಲ್ಲ. ನಮ್ಮಲ್ಲಿ ಆರೋಪಿಯನ್ನು ಹಿಡಿದುಕೊಂಡು ಬಂದಿಲ್ಲ. ಬಿಟ್ಟುಬಿಟ್ಟಿದ್ದಾರೆ.
ಬೇರೆ ದೇಶಕ್ಕೆ ಪರಾರಿಯಾಗಿದ್ದಾರೆ ಎಂದಾಗಿದ್ದರೆ, ಆಗ ಸಿಬಿಐ ತನಿಖೆಯ ಬಗ್ಗೆ ಯೋಚಿಸಬಹುದಿತ್ತು. ಈಗಾಗಲೇ ಆರೋಪಿಯನ್ನು ಬಂಧಿಸಿದ್ದೇವೆ. ತನಿಖೆ ನಡೆಯುತ್ತಿದೆ. ಫಲಿತಾಂಶ ಏನು ಎಂದು ಕಾದುನೋಡೋಣ. ರಾಜ್ಯದಲ್ಲಿ ಈ ಮೊದಲು ಹಲವು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದ್ದೇವೆ. ಅದರಿಂದಾಗಿರುವುದೇನು ಎಂಬುದು ನಮ್ಮ ಕಣ್ಣ ಮುಂದಿದೆ ಎಂದರು.
ನಾವು ಏನಾದರೂ ಹೇಳಿದರೆ ಅದನ್ನು ತಿರುಚುವುದು, ಅನಗತ್ಯವಾಗಿ ಟೀಕೆ ಮಾಡುವುದು ಸರಿಯಲ್ಲ. ಒಂದು ವ್ಯವಸ್ಥೆಯಿದೆ. ಅದರ ಪ್ರಕಾರವೇ ನಾವು ಮುನ್ನಡೆಯಬೇಕಿದೆ ಎಂದು ಹೇಳಿದರು.
ಈ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದೂ ಇಲ್ಲದಂತಹ ದ್ವೇಷಗಳು ಕಂಡುಬರುತ್ತಿವೆ. ಖುದ್ದು ಪ್ರಧಾನಿಯವರೇ ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಹಿಂದೆಂದೂ ಈ ರೀತಿ ಇರಲಿಲ್ಲ. ಜನ ಇದನ್ನೆಲ್ಲಾ ಹೇಗೆ ಸ್ವೀಕರಿಸುತ್ತಾರೆ ಎಂಬುದು ಗೊತ್ತಿಲ್ಲ. ನಾಯಕರುಗಳು ಹೇಳಿಕೆ ನೀಡಿದಾಕ್ಷಣ ಜನ ಚಪ್ಪಾಳೆ ಹೊಡೆಯುವುದು ಸಹಜ. ಆದರೆ ನಮ್ಮ ವ್ಯಕ್ತಿತ್ವವನ್ನು ಅದರ ಆಧಾರದ ಮೇಲೆಯೇ ಅಳೆಯುತ್ತಾರೆ. ಚಪ್ಪಾಳೆ ಹೊಡೆದಾಕ್ಷಣ ಹೇಳಿದ್ದು ಸರಿ ಎಂಬುದು ಸಮರ್ಥನೆಯಾಗುವುದಿಲ್ಲ
ಎಂದರು. ಲೋಕಸಭಾ ಚುನಾವಣೆ ಯಲ್ಲಿ ಊಹೆಗೂ ಮೀರಿದ ಫಲಿತಾಂಶ ಬರಲಿದೆ. ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದರು.