ಬೆಂಗಳೂರು,ಏ.18- ನಮ್ಮ ರಾಜ್ಯದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಬಾರದೆಂದು ರಾಜಾರೋಷವಾಗಿ ಹಿಂದೂ ಕಾರ್ಯಕರ್ತರಿಗೆ ಬಹಿರಂಗವಾಗಿಯೇ ಜೀವ ಬೆದರಿಕೆ ಹಾಕುತ್ತಾರೆ ಎಂದರೆ ಇಂತಹ ದೇಶದ್ರೋಹಿಗಳಿಗೆ ಕಾಂಗ್ರೆಸ್ ಕುಮ್ಮಕ್ಕೇ ಕಾರಣ ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ ಸರ್ಕಾರದ ವಿರುದ್ಧ ಕೆಂಡ ಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಆರಾಧ್ಯ ದೈವ, ಮರ್ಯಾದ ಪುರುಷೋತ್ತಮ ಶ್ರೀರಾಮ್ ಘೋಷಣೆ ಕೂಗಲು ಯಾರ ಅನುಮತಿ ಬೇಕಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ನಾವು ಏನೂ ಬೇಕಾದರೂ ಮಾಡಬಹುದೆಂದು ಒಂದು ಕೋಮಿನವರಿದ್ದಾರೆ. ಇದಕ್ಕೆಲ್ಲ ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಜೈ ಶ್ರೀರಾಮ್ ಎನ್ನಲು ಯಾರ ಅನುಮತಿಯೂ ಬೇಕಾಗಿಲ್ಲ. ಇವರು ಇಬ್ಬರಿಗೆ ಧಮ್ಕಿ ಹಾಕಿರಬಹುದು. ಲಕ್ಷಾಂತರ ಕಾರ್ಯಕರ್ತರು, ಜೈ ಶ್ರೀರಾಮ್ ಎಂದು ಕೂಗುತ್ತಾರೆ. ನಿಮಗೆ ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದರು.
ಇದು ಭಾರತ. ನಮಗೆ ಶ್ರೀರಾಮ ಆದರ್ಶ. ಜೈಶ್ರೀರಾಮ್ ಎಂದು ಕೂಗೇ ಕೂಗುತ್ತೇವೆ. ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಅಲ್ಲಾ ಎಂದು ಮಾತ್ರ ಹೇಳಿ, ಶ್ರೀರಾಮ್ ಹೇಳಬೇಡಿ ಅಂದರೆ ಏನಿದು..? ಇಂಥವರಿಗೆಲ್ಲ ಕಾಂಗ್ರೆಸ್ ಪ್ರಚೋದನೆ ಇದೆ ಎಂದು ಆರೋಪಿಸಿದರು.
ನಾವೇನ್ ಘೋಷಣೆ ಕೂಗಬೇಕು, ಏನು ಪೂಜೆ ಮಾಡಬೇಕು ಎಂಬ ದುಸ್ಥಿತಿಗೆ ಬಂದಿದೆಯಾ? ಬಹುಸಂಖ್ಯಾತರ ಭಾವನೆಗಳಿಗೆ ಸ್ಪಂದಿಸದ ಸರ್ಕಾರ ಇರಬಾರದು. ತಕ್ಷಣವೇ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದಲೂ ತುಷ್ಟೀಕರಣ ರಾಜಕಾರಣ, ಅದರ ಬಿಸಿ, ಅದರ ಪ್ರಭಾವ ನಿತ್ಯ ಕಾಣುತ್ತಿದೆ. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಎಂದು ದೂರಿದರು. ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡೋರಿಗೆ ಬ್ರದರ್ಸ್, ರಾಮೇಶ್ವರಂ ಬ್ಲಾಸ್ಟ್ ಪ್ರಕರಣ, ಪಾಕಿಸ್ತಾನ ಜಿಂದಾಬಾದ್ ಎಲ್ಲದರಲ್ಲೂ ಸರ್ಕಾರದ ತುಷ್ಟೀಕರಣ ಎದ್ದು ಕಾಣುತ್ತಿದೆ. ವಿದ್ಯಾರಣ್ಯಪುರ ಘಟನೆ ನೋಡಿದಾಗ ನಾವೆಲ್ಲಿದ್ದೀವಿ ಅನ್ನೋ ಅನುಮಾನ ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಸಂಸ್ಕೃತಿನೇ ಹಾಗೇ ಅವರದ್ದು ಬರೀ ಕಬಳಿಕೆ ಕಬಳಿಕೆ. ಮಾಜಿ ಪ್ರಧಾನಿ ದೇವೇಗೌಡರು ಮಾಡಿರುವ ಆರೋಪಕ್ಕೆ ಮೊದಲು ಡಿ.ಕೆ.ಶಿವಕುಮಾರ್ ಉತ್ತರ ಕೊಡಬೇಕು, ಅದು ಬಿಟ್ಟು ಉಡಾಫೆಯಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ನಿನ್ನೆ ಕನಕಪುರದಲ್ಲಿ ಜನ ಸಾಗರವೇ ಹರಿದುಬಂದಿತ್ತು. ಕನಕಪುರದಲ್ಲೇ ಡಿಕೆ ಸಹೋದರರಿಗೆ ಮತ ಹಾಕಿ ಏನು ಪ್ರಯೋಜನ ಎನ್ನುತ್ತಿದ್ದಾರೆ. ಡಿ.ಕೆ.ಸುರೇಶ್ಗೂ ಹಾಗೂ ಡಾ.ಮಂಜುನಾಥ್ ಅವರಿಗೂ ಅಜಗಜಾಂತರ ವ್ಯತ್ಯಾಸ ಇದೆ. ರಾಹುಲ್ ಗಾಂ, ಡಿ.ಕೆ ಸುರೇಶ್ ಒಂದು ಕಡೆ ನರೇಂದ್ರ ಮೋದಿ, ಸಿ.ಎನ್.ಮಂಜುನಾಥ್ ಜೋಡಿ ಒಂದು ಎಂದರು.
ಲೋಕಸಭಾ ಚುನಾವಣೆಯಲ್ಲಿ ಏನಾದರೂ ಮಾಡಿ ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಪಕ್ಷ ಎಲ್ಲಾ ತಂತ್ರವನ್ನು ಮಾಡುತ್ತಿದೆ. ಅದಕ್ಕೆ ಒಂದು ನಿಯಮ ಇಲ್ಲ ನೀತಿ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ಸ್ಥಾನವೂ ಬರುವುದಿಲ್ಲ. ಅವರ ನಾಯಕನೇ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.