Monday, July 8, 2024
Homeರಾಜ್ಯಮುಡಾದಲ್ಲಿ ಯಾವ ಹಗರಣವೂ ನಡೆದಿಲ್ಲ : ಸಚಿವ ಬೈರತಿ ಸುರೇಶ್‌

ಮುಡಾದಲ್ಲಿ ಯಾವ ಹಗರಣವೂ ನಡೆದಿಲ್ಲ : ಸಚಿವ ಬೈರತಿ ಸುರೇಶ್‌

ಮೈಸೂರು, ಜು.5- ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ಯಾವ ಹಗರಣ ಇದೆ. ಅದರಲ್ಲಿ ಯಾವ ಹಗರಣವೂ ಇಲ್ಲ. ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಿಂದ ಯಾರಿಗೆ ನಿವೇಶನ ನೀಡಲಾಗಿದೆ ಎಂಬ ವಿಚಾರವನ್ನು ಇಬ್ಬರು ಐಎಎಸ್‌‍ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ನಿವೇಶನವನ್ನೂ ರೈತರಿಗೆ, ಖಾಸಗಿಯವರಿಗೆ, ಏಜೆಂಟರಿಗೆ ನಿವೇಶನ ನೀಡಲಾಗಿದೆ ಎಂಬುದರ ಪರಿಶೀಲನೆ ನಡೆಯುತ್ತಿದೆ. ಹಗರಣ ಎಂದು ಸಾಬೀತು ಆದ ಮೇಲೆ ಮುಂದಿನ ಚರ್ಚೆ ಮಾಡಬಹುದು ಎಂದರು.

ಈ ಪ್ರಕರಣಕ್ಕೂ ಡಿ.ಕೆ.ಶಿವುಕುಮಾರ್‌ ಅವರಿಗೂ ಸಂಬಂಧ ಇಲ್ಲ. ಅವರು ಬೆಂಗಳೂರಿನ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಮೈಸೂರಿನಲ್ಲಿ ಅವರ ಪಾತ್ರ ಇರುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು. ಮುಡಾದಲ್ಲಿ ಏನಾಗಿದೆ ಎಂದು ಸಿಬಿಐ ತನಿಖೆಗೆ ಒಪ್ಪಿಸಬೇಕು. ಹಗರಣ ನಡೆದಿದ್ದರೆ ತಾನೇ ಸಿಬಿಐಗೆ ವಹಿಸುವುದು. ಏನು ಆಗೇ ಇಲ್ಲ ಎಂದ ಮೇಲೆ ಸಿಬಿಐ ತನಿಖೆ ಯಾಕೆ ಎಂದ ಅವರು, ನಮಲ್ಲಿ ಪೊಲೀಸ್‌‍ ಅಧಿಕಾರಿಗಳಿಲ್ಲವೇ, ಬಿಜೆಪಿಯವರು ಎಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದರು ಎಂದು ಪ್ರಶ್ನಿಸಿದರು.

ಮುಡಾ ಪ್ರಕರಣದಲ್ಲಿ ಇಬ್ಬರು ಐಎಎಸ್‌‍ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರೈತರಿಗೆ ನಿವೇಶನ ನೀಡದೇ ಮೂರನೇ ವ್ಯಕ್ತಿಗಳಿಗೆ ನೀಡಲಾಗಿದೆ ಎಂಬ ಆರೋಪವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಅದರ ಪರಿಶೀಲನೆಗೆ ತನಿಖೆ ನಡೆಸುತ್ತಿರುವ ಇಬ್ಬರು ಐಎಎಸ್‌‍ ಅಧಿಕಾರಿಗಳಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ.

ಅದು ಮುಗಿಯುವವರೆಗೂ ಕಾಯಬೇಕು. ಅದಕ್ಕೂ ಮೊದಲು ಸಿಬಿಐ, ಎಫ್‌ಬಿಐ ತನಿಖೆಗೆ ಕೊಡಿ ಎಂದರೆ ಬಿಜೆಪಿ-ಜೆಡಿಎಸ್‌‍ನವರು ಹೇಳಿದರೆ, ಸರ್ಕಾರ ಅದನ್ನು ಪಾಲನೆ ಮಾಡಬೇಕೆ. ಸರ್ಕಾರಕ್ಕೆ ತನ್ನದೇ ಆದ ವ್ಯವಸ್ಥೆಯಲ್ಲಿ ಕೆಲಸ ಮಾಡಲಿದೆ ಎಂದರು. ಕಾಂಗ್ರೆಸ್‌‍ನಲ್ಲಿ ಯಾವುದೇ ಬಣಗಳಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಹೆಚ್‌.ವಿಶ್ವನಾಥ್‌ ವಿರುದ್ಧ ವಾಗ್ದಾಳಿ ನಡೆಸಿದರು.

ವಿಶ್ವನಾಥ್‌ ತಮ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದಾರೆ. ರಿಯಲ್‌ ಎಸ್ಟೇಟ್‌ ಗಿರಾಕಿ ಎಂದಿದ್ದಾರೆ. ನನಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ. ವಯಸ್ಸಿಗೆ ಮರ್ಯಾದೆ ಕೊಟ್ಟು ಇಷ್ಟು ದಿನ ಸುಮನಿದ್ದೆ. ಯಾರ್ರಿ ಅವನು ವಿಶ್ವನಾಥ್‌ ಎಂದು ಸಿಡಿಮಿಡಿಯಾದ ಸಚಿವರು, ಅವನು ಅವನ ಮಗ ನನ್ನ ಬಳಿ ಬಂದು ನಿವೇಶನ ಕೇಳಿದ್ದರು. ಆ ಕುರಿತ ಫೋಟೋ ನನ್ನ ಬಳಿ ಇದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.ನಾನು ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತೇನೆ. ಅದೇನು ವ್ಯವಹಾರ ಅಲ್ಲವೇ ಅವನಂತೆ ನಾನೇನು ರೊಲ್‌ಕಾಲ್‌ ಗಿರಾಕಿ ಅಲ್ಲ ಎಂದು ತಿರುಗೇಟು ನೀಡಿದರು.

RELATED ARTICLES

Latest News