Saturday, July 27, 2024
Homeರಾಷ್ಟ್ರೀಯಜಾಮೀನುರಹಿತ ವಾರೆಂಟ್‌ ಕುರಿತು ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ

ಜಾಮೀನುರಹಿತ ವಾರೆಂಟ್‌ ಕುರಿತು ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ

ಬೆಂಗಳೂರು,ಮೇ.3- ಘೋರ ಅಪರಾಧ ಎಸಗಿರುವ ಆರೋಪಕ್ಕೆ ಸಿಲುಕಿರದ ವ್ಯಕ್ತಿಗಳ ವಿರುದ್ಧ ಜಾಮೀನುರಹಿತ ವಾರೆಂಟ್‌ಗಳನ್ನು ವಾಡಿಕೆಯಂತೆ ಜಾರಿ ಮಾಡುವ ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ ನೀಡಿದೆ.

ಘೋರ ಅಪರಾಧ ಎಸಗಿರುವ ಆರೋಪಕ್ಕೆ ಸಿಲುಕಿಲ್ಲದ ಅಥವಾ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ ಎಂದೆನಿಸದ ಅಥವಾ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದೆನಿಸದ ಆರೋಪಿಗಳ ವಿರುದ್ಧ ನೇರವಾಗಿ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಬಾರದೆಂದು ಸುಪ್ರೀಂಕೋರ್ಟ್‌ ಹೇಳಿದೆ.

ಮೇ.1 ರಂದು ನ್ಯಾಯಮೂರ್ತಿಗಳಾದ ಸಂಜೀವ್‌ಖನ್ನಾ ಹಾಗೂ ನ್ಯಾಯಮೂರ್ತಿ ಎಸ್‌.ವಿ.ಎನ್‌.ಭಟ್‌ ಅವರನ್ನೊಳಗೊಂಡ ಪೀಠ ತಮ್ಮ ತೀರ್ಪಿನಲ್ಲಿ ಜಾಮೀನುರಹಿತ ವಾರೆಂಟ್‌ಗಳನ್ನು ನೀಡಲು ಯಾವುದೇ ಮಾರ್ಗಸೂಚಿಗಳಿಲ್ಲದಿದ್ದರೂ ಆರೋಪಿಯನ್ನು ಘೋರ ಅಪರಾಧದ ಆರೋಪ ಹೊರಿಸದ ಹೊರತು ಜಾಮೀನುರಹಿತ ವಾರೆಂಟ್‌ಗಳನ್ನು ಹೊರಡಿಸಬಾರದು ಎಂದು ಹೇಳಿದೆ.

ಅಲ್ಲದೆ ಆರೋಪಿ ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿದ್ದಾನೆ ಮತ್ತು ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದೆನಿಸಿದರೆ ಅಥವಾ ಸಾಕ್ಷ್ಯವನ್ನು ತಿರುಚುವ, ನಾಶಪಡಿಸುವ ಸಾಧ್ಯತೆಯಿದೆ ಎಂದೆನಿಸದ ಹೊರತು ಜಾಮೀನುರಹಿತ ವಾರೆಂಟ್‌ಗಳನ್ನು ವಾಡಿಕೆಯಂತೆ ಜಾರಿ ಮಾಡಬಾರದು ಎಂದು ಹೇಳಿದೆ.

ಪ್ರಕರಣವು ಸಾರ್ವಜನಿಕ ಅಥವಾ ರಾಜ್ಯದ ಹಿತಾಸಕ್ತಿ ಹೊಂದಿಲ್ಲದ ಹೊರತು ವ್ಯಕ್ತಿಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗದು. ಅದರಂತೆ ಜಾಮೀನುರಹಿತ ವಾರೆಂಟ್‌ಗಳನ್ನು ಜಾರಿ ಮಾಡಲಾಗದು ಎಂಬುದು ಕಾನೂನಿನ ನಿಲುವು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ.

ಖಾಸಗಿ ವ್ಯಕ್ತಿಗಳ ನಡುವಿನ ಹಣಕಾಸು ವಿವಾದ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್‌ 323, 504, 506, 120 ಬಿ, 308, 325 ಅಡಿಯಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದರು. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಿತ್ತು. ಹಾಗಿದ್ದರೂ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಮೇಲ್ಮನವಿದಾರನ ವಿರುದ್ಧ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಿತ್ತು. ಕೋರ್ಟ್‌ ಜಾರಿ ಮಾಡಿದ್ದ ವಾರೆಂಟ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದ್ದರಿಂದ ಮೇಲ್ಮನವಿದಾರರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

RELATED ARTICLES

Latest News