ಬೆಳಗಾವಿ,ಡಿ.18- ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿಯಲ್ಲಷ್ಟೇ ಅಲ್ಲದೆ ರಾಜಕೀಯವಾಗಿಯೂ ತೀವ್ರ ಸ್ವರೂಪದ ಅನ್ಯಾಯವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಸುವರ್ಣಸೌಧದಲ್ಲಿಂದು ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ದಕ್ಷಿಣ ಕರ್ನಾಟಕ ಜಿಲ್ಲೆಯಲ್ಲಿ 17 ಜಿಲ್ಲೆಗಳಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 14 ಜಿಲ್ಲೆಗಳಿವೆ. ಇನ್ನೂ ನಾಲ್ಕೈದು ಜಿಲ್ಲೆಗಳು ಹೆಚ್ಚುವರಿಯಾಗಿ ವಿಂಗಡಣೆಯಾಗಬೇಕಿದೆ ಎಂದರು.
ನಮ ಭಾಗದಲ್ಲಿ 96 ಮಂದಿ ಶಾಸಕರಿದ್ದರೆ ದಕ್ಷಿಣ ಕರ್ನಾಟಕದಲ್ಲಿ 121 ಶಾಸಕರಿದ್ದಾರೆ. ಸಂಸದರ ಪೈಕಿ ನಮಲ್ಲಿ 12 ಮಂದಿ ಇದ್ದರೆ ದಕ್ಷಿಣ ಕರ್ನಾಟಕದಲ್ಲಿ 16 ಮಂದಿ ಇದ್ದಾರೆ. ವಿಧಾನಪರಿಷತ್ ಸದಸ್ಯರ ಪೈಕಿ ದಕ್ಷಿಣ ಕರ್ನಾಟಕದಲ್ಲಿ 53 ಮಂದಿ ಇದ್ದರೆ, ಉತ್ತರ ಕರ್ನಾಟಕದಲ್ಲಿ 22 ಮಂದಿ ಇದ್ದಾರೆ.
ರಾಜ್ಯಸಭಾ ಸದಸ್ಯರ ಪೈಕಿ 16 ಮಂದಿ ದಕ್ಷಿಣ ಕರ್ನಾಟಕ ಭಾಗದವರು ಉತ್ತರ ಕರ್ನಾಟಕದಲ್ಲಿ ಇಬ್ಬರು ಮಾತ್ರ ಇದ್ದಾರೆ. ಮತ ಹಾಕುವವರು ನಾವು, ಅಧಿಕಾರ ಅನುಭವಿಸುವವರು ಆ ಭಾಗದ ಜನ ಎಂಬಂತಾಗಿದೆ. ಕಂದಾಯ ಗ್ರಾಮಗಳಲ್ಲೂ ಅನ್ಯಾಯವಾಗಿದೆ. 21,160 ಗ್ರಾಮಗಳಿದ್ದರೆ, ಉತ್ತರ ಕರ್ನಾಟಕದಲ್ಲಿ 9,571 ಗ್ರಾಮಗಳಿವೆ. ಗ್ರಾಮಪಂಚಾಯಿತಿಗಳಲ್ಲಿ 3,364 ಗ್ರಾಮಗಳಿದ್ದರೆ, ಉತ್ತರಕರ್ನಾಟಕ ಭಾಗದಲ್ಲಿ 2,792 ಗ್ರಾಮಪಂಚಾಯಿತಿಗಳಿವೆ.
ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಕಾನೂನು, ವೈದ್ಯಕೀಯ ಆಸ್ಪತ್ರೆಗಳು ಎಲ್ಲದರಲ್ಲೂ ದಕ್ಷಿಣ ಕರ್ನಾಟಕವೇ ಮೇಲುಗೈ ಸಾಧಿಸಿದೆ ಎಂದು ವಿವರಿಸಿದರು.
ನಾವು ದಕ್ಷಿಣ ಕರ್ನಾಟಕದ ವಿಚಾರವಾಗಿ ಅಸಹನೆ ವ್ಯಕ್ತಪಡಿಸುತ್ತಿಲ್ಲ. ಆದರೆ ಸಮಾನ ಅಭಿವೃದ್ಧಿಯಾಗಬೇಕು. ಗ್ಯಾರಂಟಿ ನೀಡುವ ಬದಲಾಗಿ ನೀರಾವರಿ ಕಲ್ಪಿಸಿ ಎಲ್ಲಾ ಕೈಗಳಿಗೆ ಉದ್ಯೋಗ ಕೊಡಿ. ಸಚಿವ ಸಂಪುಟ ಸಭೆಯಲ್ಲಿರುವ ಸಚಿವರಲ್ಲೂ ಮೂರ್ನಾಲ್ಕು ಮಂದಿಯಷ್ಟೇ ಚರ್ಚೆಯಲ್ಲಿ ತೊಡಗಿಸಿಕೊಳ್ಳುತಾರೆ. ಉಳಿದವರು ಮೌನಿಗಳು. ಸುವರ್ಣ ಸೌಧವನ್ನು ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಿಸಲಾಗಿದೆ. ಯಾವ ಕಚೇರಿಗಳೂ ಇಲ್ಲಿಗೆ ಸ್ಥಳಾಂತರಗೊಂಡಿಲ್ಲ. ಕೃಷ್ಣಾ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರು ಇಲ್ಲಿಗೆ ಪ್ರವಾಸಕ್ಕೆ ಬಂದಂತೆ ಬಂದು ಹೋಗುತ್ತಾರೆ ಎಂದು ಆರೋಪಿಸಿದರು.
ಉತ್ತರ ಕರ್ನಾಟಕ ಭಾಗಕ್ಕೆ ತನ್ನದೇ ಆದ ವೈಭೋಗ ಇದೆ. ಕರಾವಳಿ ಭಾಗಕ್ಕೆ ಹೆಚ್ಚು ಆದಾಯ ಇದೆ. ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಬರಕ್ಕೆ ತುತ್ತಾಗಿ ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿಯಲ್ಲಿರುವ ಕುಟುಂಬಗಳಿವೆ ಎಂದರು.
ಯತ್ನಾಳ್ ಮಾತನಾಡುತ್ತಿದ್ದ ವೇಳೆ ಆಡಳಿತ ಪಕ್ಷದ ಶಾಸಕ ಕೋ.ನ.ರೆಡ್ಡಿಯವರು ಯತ್ನಾಳ್ ಸಚಿವ ಜಮೀರ್ ಅವರನ್ನು ಭೇಟಿ ಮಾಡಿರುವ ಕುರಿತು ಲೇವಡಿ ಮಾಡಿದರು. ಆಗ ನಾನು ಯಾವುದೇ ಫ್ಲಾಟ್ ಮಂಜೂರು ಮಾಡಿಸಿಕೊಳ್ಳಲು ಹೋಗಿರಲಿಲ್ಲ ಎಂದು ಯತ್ನಾಳ್ ತಿರುಗೇಟು ನೀಡಿದರು.
ನಾವು ಮುಗ್ಧರು ಎಂದು ಯತ್ನಾಳ್ ಹೇಳಿದಾಗ ನಿಮನ್ನು ಮುಗ್ಧರು ಎಂದು ಹೇಳಲು ಸಾಧ್ಯವೇ? ಎಂದು ಸುನಿಲ್‌ಕುಮಾರ್ ಛೇಡಿಸಿದರು.ನಾವು ಕರಾವಳಿ ಭಾಗದವರಂತೆ ಬುದ್ಧಿವಂತರಲ್ಲ ಎಂದು ಯತ್ನಾಳ್ ಮತ್ತೊಮೆ ಹೇಳಿದಾಗ, ಬುದ್ಧಿವಂತರು ಬುದ್ಧಿವಂತರು ಎಂದು ಹೇಳಿ ದಡ್ಡರನ್ನಾಗಿ ಮಾಡಲಾಗುತ್ತಿದೆ ಎಂದು ಸಭಾಧ್ಯಕ್ಷರು ಹಾಸ್ಯಚಟಾಕಿ ಹಾರಿಸಿದರು.
ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ಅಮೋಘವರ್ಷ ಸೇರಿದಂತೆ ರಾಜ, ಮಹಾರಾಜರು ಆಡಳಿತ ನಡೆಸಿರುವ ಉತ್ತರಕರ್ನಾಟಕ ಭಾಗದ ಬಹುತೇಕ ರಾಜ-ಮಹಾರಾಜರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರನ್ನು ತೋರಿಸುವಂತೆ ಕರ್ನಾಟಕದಲ್ಲೂ ಇಮಡಿ ಪುಲಿಕೇಶಿ ಅವರನ್ನು ಗೌರವಿಸಬೇಕು ಹಾಗೂ ರಾಜ್ಯದ ರಾಯಭಾರಿ ಎಂದು ಘೋಷಿಸಬೇಕು ಎಂದರು.
ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿಯಾದವರಿಗೆ ಸ್ಪಷ್ಟ ಕಲ್ಪನೆ ಇರಬೇಕು. ನಾನು ಕೇಂದ್ರದಲ್ಲಿ ಸಚಿವರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ ಎನ್ನುತ್ತಿದ್ದಂತೆ ಎಂ.ಬಿ.ಪಾಟೀಲ್ ಮಧ್ಯಪ್ರವೇಶಿಸಿದರು. ನಾನು ರಾಜ್ಯಸಚಿವನಿಗಿಂತಲೂ ಹೆಚ್ಚು ಪ್ರಭಾವಿ ಇದ್ದೇನೆ. ಮಂತ್ರಿಯಾಗಿ ನಿಮ ರೀತಿ ಅಸಹಾಯಕನಾಗಿರುವುದಿಲ್ಲ ಎಂದರು.ಶಿಕ್ಷಣ, ಕೈಗಾರಿಕೆ, ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಂಜುಂಡಪ್ಪ ವರದಿ ಹಿಂದುಳಿದ ಪ್ರದೇಶಗಳನ್ನು ಸ್ಪಷ್ಟವಾಗಿ ಗುರುತಿಸಿತ್ತು ಎಂದು ಹೇಳಿದರು.