ಬೆಂಗಳೂರು, ನ.22- ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಎರಡು ದಿನಗಳನ್ನು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕಾಯ್ದಿರಿಸುವುದಾಗಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಎಸ್. ಹೊರಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಡಿ.6ಮತ್ತು7ರಂದು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ಚರ್ಚೆಗೆ ಎರಡು ದಿನ ನಿಗದಿ ಮಾಡಿದ್ದೇವೆ. ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭವಾಗುವುದಕ್ಕೂ ಪೂರ್ವದಲ್ಲೇ ಧರಣಿ, ಪ್ರತಿಭಟನೆ, ಸತ್ಯಾಗ್ರಹ ಮಾಡುವಂತಹ ಸಂಘಟನೆಗಳ ಮುಖಂಡರೊಂದಿಗೆ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದರು.
ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸುವ ಹಿನ್ನಲೆಯಲ್ಲಿ ಸರ್ಕಾರಕ್ಕೆ ಸಲಹೆ ನೀಡುವುದು ಸೂಕ್ತ ಎಂದು ನಾನು ಭಾವಿಸಿ ಮುಖ್ಯಮಂತ್ರಿಗಳಿಗೆ ಹಾಗೂ ಕೃಷಿ, ಕಂದಾಯ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಿಗೆ ಪತ್ರ ಬರೆದು ನನ್ನ ಭಾವನೆಗಳನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದರು.
ಕರ್ನಾಟಕ ವಿಧಾನ ಮಂಡಲದ ನೂರಐವತ್ತೊಂದನೇ ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿ.4ರಿಂದ 15ರ ವರೆಗೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಧಿವೇಶನಕ್ಕಾಗಿ ಒಟ್ಟಾರೆ 400ಕ್ಕೂ ಅಧಿಕ ಕೋಟಿ ರೂಪಾಯಿಯನ್ನು ಸರ್ಕಾರ ಖರ್ಚು ಮಾಡುತ್ತಿದೆ ಎಂದರು. ಒಂದು ಅರ್ಥದಲ್ಲಿ ಬೆಳಗಾವಿಯ ಅಧಿವೇಶನ ಎಂದರೆ ಕೇವಲ ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳಿಗೆ ವೇದಿಕೆ ಕಲ್ಪಿಸಿದಂತಾಗಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು ಎನ್ನುವುದು ಹಲವರ ಅಭಿಪ್ರಾಯವಾಗಿದ್ದು, ಬಹಳಷ್ಟು ಜನ ಈ ರೀತಿಯ ಭಾವನೆಯನ್ನು ನನ್ನ ಮುಂದೆ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.
ಜಯಪ್ರಕಾಶ್ ಹೆಗ್ಡೆ ಅವಧಿ ಮುಂದುವರಿಕೆ: ಸಿಎಂ ಸಿದ್ದರಾಮಯ್ಯ
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲಾಗುವ ಅಧಿವೇಶನದ ಸಂದರ್ಭದಲ್ಲಿ ವಿಧಾನ ಸೌಧದ ಹೊರಗಡೆ ಧರಣಿ, ಸಮಾವೇಶ, ಸತ್ಯಾಗ್ರಹ ಮುಂತಾದ ಚಟುವಟಿಕೆಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲ ಉದ್ದೇಶ ಸಮರ್ಪಕವಾಗಿ ಈಡೇರುತ್ತಿಲ್ಲ ಎನ್ನುವುದು ಹಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ ಎಂದರು.
ಕಳೆದ ವರ್ಷ ಡಿಸೆಂಬರ್ 19 ರಿಂದ 29 ರ ವರೆಗೆ ನಡೆದ ಅಧಿವೇಶನದ ಸಂದರ್ಭದಲ್ಲಿ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕೃತ ಮಾಹಿತಿ ಪ್ರಕಾರ 10 ದಿನಗಳಲ್ಲಿ 102 ಕ್ಕೂ ಹೆಚ್ಚು ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿವೆ. ಅವುಗಳಲ್ಲಿ ಸುಮಾರು 64 ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ, ಸತ್ಯಾಗ್ರಹ, ಧರಣಿ ಮುಂತಾದ ಹೋರಾಟಾತ್ಮಕ ಚಟುವಟಿಕೆಗಳನ್ನು ನಡೆಸಿವೆ. ಈ ಎಲ್ಲಾ ಪ್ರತಿಭಟನೆ ಸತ್ಯಾಗ್ರಹಗಳಲ್ಲಿ ಸುಮಾರು 65,000 ದಿಂದ 80,000 ಜನರು ಪಾಲ್ಗೊಂಡಿದ್ದರು ಎಂಬ ಮಾಹಿತಿಯನ್ನು ಅವರು ನೀಡಿದರು.
ಈ ಎಲ್ಲಾ ಪ್ರತಿಭಟನೆ, ಸತ್ಯಾಗ್ರಹ, ಸಮಾವೇಶ, ಧರಣಿಗಳಿಗಾಗಿ ಸರ್ಕಾರದ ವತಿಯಿಂದ ಸುಮಾರು 14 ಟೆಂಟ್‍ಗಳನ್ನು ನಿರ್ಮಾಣ ಮಾಡಲಾಗಿತ್ತು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ಸೌಧದ ಹೊರಗಡೆ ಪ್ರತಿಭಟನೆಗಳ ಸಂಖ್ಯೆ ಇಳಿಮುಖವಾದರೆ ಹಾಗೂ ಸದನದ ಒಳಗಡೆ ಜನಸಾಮಾನ್ಯರ ಹಾಗೂ ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಹಾಗೂ ಗಂಭೀರ ಚರ್ಚೆ ನಡೆದು ಪರಿಹಾರ ಕಂಡುಕೊಂಡರೆ ಉತ್ತರ ಕರ್ನಾಟಕ ಭಾಗದಲ್ಲಿ ವಿಧಾನ ಮಂಡಲದ ಅವೇಶನ ನಡೆಸಿದ್ದು, ಸಾರ್ಥಕ. ಇದರಿಂದ ಸರ್ಕಾರಕ್ಕೆ ಗೌರವ ಹಾಗೂ ಒಳ್ಳೆಯ ಹೆಸರು ಬರುತ್ತದೆ ಎನ್ನುವುದು ನನ್ನ ಮನದಾಳದ ಇಂಗಿತವಾಗಿದೆ ಎಂದು ಅವರು ತಿಳಿಸಿದರು.