ಬೆಂಗಳೂರು,ಜ.10- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‍ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಜೆಪಿ ಭವನದಲ್ಲಿಂದು ನಡೆದು ಕೋಲಾರ ಲೋಕಸಭಾ ಕ್ಷೇತ್ರದ ಪಕ್ಷದ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ಸ್ರ್ಪಸುವುದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು. ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದೊಂದಿಗೆ ಲೋಕಸಭೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಡೆಯಬೇಕೆಂಬ ಉದ್ದೇಶವಿದೆ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ರ್ಪಸಲಿದ್ದಾರೆ ಎಂಬ ವಿಚಾರದ ಬಗ್ಗೆ ಇನ್ನು ಯಾವುದೇ ಸ್ಪಷ್ಟತೆ ಇಲ್ಲ. ಪಕ್ಷದ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಕ್ಷೇತ್ರ ಹಂಚಿಕೆ ಕುರಿತಂತೆ ಎಚ್.ಡಿ.ಕುಮಾರಸ್ವಾಮಿ ಅವರು ಈ ತಿಂಗಳಲೇ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲಿದ್ದಾರೆ. ಜೆಡಿಎಸ್, ಬಿಜೆಪಿ ಸೇರಿ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳನ್ನು ಎನ್‍ಡಿಎ ಮೈತ್ರಿಕೂಟ ಗೆಲ್ಲಬೇಕೆಂಬ ಉದ್ದೇಶವಿದೆ. ಆ ನಿಟ್ಟಿನಲ್ಲಿ ಎರಡೂ ಪಕ್ಷಗಳು ಕೆಲಸ ಮಾಡುತ್ತಿವೆ ಎಂದರು.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಇದುವರೆಗೂ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತೇ..?
ಮಂಡ್ಯ ಮತ್ತು ಕೋಲಾರ ಕ್ಷೇತ್ರದಲ್ಲಿ ಹಲವು ಮಂದಿ ಸ್ಪರ್ಧಾ ಆಕಾಂಕ್ಷಿಗಳಿದ್ದಾರೆ. ಇಂದು ಕೋಲಾರ ಕ್ಷೇತ್ರದ ಮುಖಂಡರ ಅಭಿಪ್ರಾಯವನ್ನು ಪಡೆಯಲು ಸಭೆ ಕರೆಯಲಾಗಿದೆ. ಅದೇ ರೀತಿ ಮಂಡ್ಯದಲ್ಲೂ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಸ್ಥಳೀಯರ ಅಭಿಪ್ರಾಯ ಆಧರಿಸಿ ನಾಯಕರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. ಬಿಜೆಪಿ ಮೈತ್ರಿ ಬಗ್ಗೆ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ರಾಜ್ಯದ ಜನರೇ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದ ಅವರು, ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಲಿದ್ದಾರೆ ಎಂಬ ವಿಚಾರ ಊಹಾಪೋಹಗಳಿಂದ ಕೂಡಿದೆ ಎಂದು ಸ್ಪಷ್ಟಪಡಿಸಿದರು.
ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಅಂದೇ ನನ್ನ ಹುಟ್ಟಿದ ಹಬ್ಬದ ದಿನವೂ ಆಗಿದೆ. ಮಂದಿರ ಉದ್ಘಾಟನೆ ಐತಿಹಾಸಿಕ ಕ್ಷಣವನ್ನು ಇಡೀ ದೇಶದ ಜನರೇ ಎದುರು ನೋಡುತ್ತಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯರು ಖುಷಿ ಪಡುವಂತಹ ವಿಚಾರ. ಅಂದು ಕೆಲವು ಕಾರ್ಯಕ್ರಮಗಳ ಮೂಲಕ ಶ್ರೀರಾಮನ ಸೇವೆ ಮಾಡಬೇಕು ಎಂದು ಭಾವಿಸಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಯಾವುದೇ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಆರೋಪಿಸಿದ ಅವರು, ರಾಮಮಂದಿರ ಮಂತ್ರಾಕ್ಷತೆ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರು ಹೆಮ್ಮೆಪಡುವಂಥದ್ದು ಎಂದರು.