ಕೈವ್(ಉಕ್ರೇನ್),ಆ.24- ರಷ್ಯಾ-ಉಕ್ರೀನ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತವು ಎಂದಿಗೂ ತಟಸ್ಥವಾಗಿಲ್ಲ ಸಂಘರ್ಷದ ಪ್ರಾರಂಭದಿಂದಲೂ ಶಾಂತಿಯ ಪಕ್ಷವನ್ನು ಆರಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೀನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಹೇಳಿದ್ದಾರೆ.
ಭಾರತ ಎಂದಿಗೂ ತಟಸ್ಥವಾಗಿರಲಿಲ್ಲ, ನಾವು ಯಾವಾಗಲೂ ಶಾಂತಿಯ ಕಡೆ ಇದ್ದೇವೆೞ ಎಂದು ಝೆಲೆನ್ಸ್ಕಿಯೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದರು. ಉಕ್ರೀನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ನಡೆದ ಮೂರು ಗಂಟೆಗಳ ಸಭೆಯಲ್ಲಿ ಬೇಗನೆ ಶಾಂತಿಗೆ ಮರಳಲು ಅನುಕೂಲವಾಗುವ ಭಾರತದ ಇಚ್ಛೆಯನ್ನು ಅವರು ಪುನರುಚ್ಚರಿಸಿದರು.
ಸಂಘರ್ಷವನ್ನು ಪರಿಹರಿಸುವ ಸಾಧನಗಳಾಗಿ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಸ್ಪರ ತೊಡಗಿಸಿಕೊಳ್ಳುವಂತೆ ಒತ್ತಾಯಿಸಿದರು. ಮಾನವೀಯ ದೃಷ್ಟಿಕೋನದಿಂದ ಯಾವುದೇ ಅಗತ್ಯವಿದ್ದರೂ, ಭಾರತ ಯಾವಾಗಲೂ ನಿಮೊಂದಿಗೆ ನಿಲ್ಲುವುದು ಮಾತ್ರವಲ್ಲ ಎರಡು ಹೆಜ್ಜೆ ಮುಂದೆ ಇರುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಅಭಯ ನೀಡಿದ್ದಾರೆ.
ಉಕ್ರೀನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೀನ್ ಶಾಂತಿ ಶೃಂಗಸಭೆಯ ಮೂಲಕ ಈ ಪ್ರದೇಶದಲ್ಲಿ ಶಾಂತಿಯನ್ನು ಪುನಃ ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಭಾರತದ ನಿರಂತರ ಸಹಕಾರವನ್ನು ಉಕ್ರೇನ್ ಬಯಸುತ್ತದೆ ಎಂದು ಹೇಳಿದರು. ವಿಶ್ವಸಂಸ್ಥೆಯ ಒಪ್ಪಂದವನ್ನು ರಾಷ್ಟ್ರಗಳು ಗೌರವಿಸುವುದು ಮುಖ್ಯ ಎಂದು ಅವರು ಹೇಳಿದರು. ಭಾರತವು ಉಕ್ರೇನ್‌ನ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಬೆಂಬಲಿಸುತ್ತದೆ.
ಇದು ನಿರ್ಣಾಯಕವಾಗಿದೆ, ಏಕೆಂದರೆ ವಿಶ್ವದ ಪ್ರತಿಯೊಬ್ಬರೂ ಯುಎನ್ ಒಡಂಬಡಿಕೆಯನ್ನು ಸಮಾನವಾಗಿ ಗೌರವಿಸಬೇಕು ಎಂದು ಝೆಲೆನ್ಸ್ಕಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಯಕನೊಂದಿಗಿನ ಸಭೆಯ ಕೊನೆಯಲ್ಲಿ ಹೇಳಿದರು.ಕೈವ್‌ನಲ್ಲಿ ಪಿಎಂ ಮೋದಿ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಸಭೆ, ಉಕ್ರೇನ್ ದೇಶ ಉದಯಿಸಿದ ನಂತರ ಆ ದೇಶಕ್ಕೆ ಭಾರತೀಯ ನಾಯಕರ ಮೊದಲ ಭೇಟಿಯಾಗಿದೆ.
ಕೈವ್ ರಷ್ಯಾದ ಕುಸ್ಕ್ ಪ್ರದೇಶದಲ್ಲಿ ಆಕ್ರಮಣವನ್ನು ಪ್ರಾರಂಭಿಸಿದರೆ, ಮಾಸ್ಕೋದ ಸೈನ್ಯವು ಪೂರ್ವ ಉಕ್ರೇನ್‌ನಲ್ಲಿ ಮುನ್ನುಗ್ಗುತ್ತಿರುವ ಸಮಯದಲ್ಲಿ ಈ ಸಭೆ ಜರುಗುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಪತ್ರಿಕಾಗೋಷ್ಠಿ ನಡೆಸಿ, ಸಂಘರ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಉಕ್ರೀನ್ ಅಧ್ಯಕ್ಷರು ಪ್ರಧಾನಿ ಮೋದಿಯವರಿಗೆ ತಿಳಿಸಿದ್ದಾರೆ. ಅಲ್ಲದೆ ಮಕ್ಕಳು ಮತ್ತು ನಾಗರಿಕರ ಸಾವಿನ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದರು.
ಸಂಘರ್ಷದಲ್ಲಿ ಮಕ್ಕಳ ಸಾವುಗಳ ಜೊತೆಗೆ ಆಕ್ರಮಣದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಜೈಶಂಕರ್ ಹೇಳಿದರು. ಭಾರತ ಉಕ್ರೀನ್ ಅನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ ಎಂದು ಝೆಲೆನ್ಸ್ಕಿ ಅವರಿಗೆ ಗೊತ್ತಿದೆ. ಸಂಘರ್ಷ ಕೊನೆಗೊಳ್ಳಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಭಾರತವು ಏನಾದರೂ ಮಾಡಬಹುದಾದರೆ, ಯಾವುದೇ ರೀತಿಯಲ್ಲಿ. ಇದು ಪ್ರಕ್ರಿಯೆಗಿಂತ ಹೆಚ್ಚಾಗಿ ನಾವು ಆಸಕ್ತಿ ಹೊಂದಿರುವ ಉದ್ದೇಶವಾಗಿದೆ. ನಮ ಕೈಲಾದದ್ದನ್ನು ಮಾಡಲು ನಾವು ಸಿದ್ಧರಿದ್ದೇವೆ. ಈ ಸಂಘರ್ಷದ ಮುಂದುವರಿಕೆ ಉಕ್ರೀನ್ ಮತ್ತು ಜಗತ್ತಿಗೆ ಭಯಾನಕವಾಗಿದೆ ಎಂದು ಜೈಶಂಕರ್ ಸುದ್ದಿಗಾರರನ್ನು ಉದ್ದೇಶಿಸಿ ಹೇಳಿದರು.
ಇತ್ತೀಚೆಗಷ್ಟೇ ಜುಲೈನಲ್ಲಿ ರಷ್ಯಾಗೆ ಭೇಟಿ ನೀಡಿದಾಗ ಅಲ್ಲಿನ ನಾಯಕರಿಗೆ ಇದು ಯುದ್ಧದ ಯುಗ ಅಲ್ಲ ಎಂದು ಪ್ರಧಾನಿ ಮೋದಿ ತಿಳಿಸಿರುವುದಾಗಿ ಝೆಲೆನ್ಸ್ಕಿ ಅವರಿಗೆ ಹೇಳಿದ್ದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಶೃಂಗಸಭೆ ನಡೆಸಲು ಪ್ರಧಾನಿ ಮಾಸ್ಕೋಗೆ ಭೇಟಿ ನೀಡಿದ್ದರು. ಉಕ್ರೀನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಪರಸ್ಪರ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ, ಝೆಲೆನ್ಸ್ಕಿ ಅವರಿಗೆ ಹೇಳಿದ್ದಾರೆ ಎಂದು ಜೈಶಂಕರ್ ಹೇಳಿದರು.