Wednesday, December 4, 2024
Homeಬೆಂಗಳೂರುಕುಖ್ಯಾತ ಅಂತಾರಾಜ್ಯ ಮನೆಗಳ್ಳನ ಸೆರೆ : 1.36 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಕುಖ್ಯಾತ ಅಂತಾರಾಜ್ಯ ಮನೆಗಳ್ಳನ ಸೆರೆ : 1.36 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

Bengaluru Police

ಬೆಂಗಳೂರು,ಡಿ.3– ಕುಖ್ಯಾತ ಅಂತಾರಾಜ್ಯ ಮನೆಗಳ್ಳನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು 1.36 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿ ಕೊಂಡಿದ್ದಾರೆ. ನಗರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ಫಿಂಗರ್ ಪ್ರಿಂಟ್ ಆಧಾರದ ಮೇಲೆ ಉತ್ತರಪ್ರದೇಶ ಮೂಲದ ಪ್ರಮುಖ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಉತ್ತರಪ್ರದೇಶದ ಮುರಾದಾಬಾದ್ನ ಜಿಲ್ಲಾ ಕಾರಾಗೃಹದಲ್ಲಿದ್ದ ಆರೋಪಿ ಫಯೇಜ್(38)ನನ್ನು ಬಾಡಿ ವಾರೆಂಟ್ ಮುಖೇನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ನಗರದ ವಿವಿಧ ಕಡೆಗಳಲ್ಲಿ ಮನೆಗಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ.

ಈ ಆರೋಪಿ ವಿರುದ್ಧ ಉತ್ತರಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಮುಂತಾದ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 65 ಪ್ರಕರಣಗಳಿವೆ. ಈ ಮೊದಲು ಸುಫಾರಿ ಕಿಲ್ಲರ್ ಆಗಿದ್ದ ಈತ ನಂತರದ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಸುಲಿಗೆ, ಮನೆಗಳ್ಳತನ ಮಾಡುತ್ತಿದ್ದನು.

ಈತನ ಜೊತೆ ಇನ್ನಿಬ್ಬರು ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಅವರುಗಳಿಗಾಗಿ ಪೊಲೀಸರು ಶೋಧ ಮುಂದುವರೆದಿದೆ. ಆರೋಗ್ಯಬಡಾವಣೆಯ ನಿವಾಸಿ, ಉದ್ಯಮಿ ಪ್ರಸನ್ನಕುಮಾರ್ ಎಂಬುವರು ಕುಟುಂಬ ಸಮೇತ ಹೊರಗೆ ಹೋಗಿದ್ದಾಗ ಅವರ ಮನೆ ಮುಂಬಾಗಿಲ ಬಾಗಿಲು ಮೀಟಿ ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಕಳವಾಗಿದ್ದ ಬಗ್ಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡರೂ ಆರೋಪಿಯ ಸುಳಿವು ದೊರೆತಿರಲಿಲ್ಲ. ನಂತರ ಫಿಂಗರ್ ಪ್ರಿಂಟ್ ಆಧಾರದ ಮೇಲೆ ಆರೋಪಿಯನ್ನು ಉತ್ತರಪ್ರದೇಶದ ಕಾರಾಗೃಹದಿಂದ ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಮನೆಗಳ್ಳತನ ಮಾಡಿರುವುದಾಗಿ ತಿಳಿಸಿದ್ದು, ಕಳವು ಮಾಡಿದ ಆಭರಣಗಳನ್ನು ಉತ್ತರಪ್ರದೇಶದ ವಿವಿಧ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ಹೇಳಿದ್ದಾನೆ.

ಅದರಂತೆ ಪೊಲೀಸರು ಮುಂಬೈನ ಜವಾರಿ ಬಜಾರ್ನ ಗಿರವಿ ಅಂಗಡಿಯಿಂದ 160 ಗ್ರಾಂ, ಚಿನ್ನಾಭರಣ, ನವಿಮುಂಬೈನ ಗಿರವಿ ಅಂಗಡಿಯಿದ 70 ಗ್ರಾಂ ಆಭರಣ, ಗುರುಗಾಂವ್ನ ಗಿರವಿ ಅಂಗಡಿಯಿಂದ 130 ಗ್ರಾಂ ಹಾಗೂ ಸಂಭಲ್ ಜಿಲ್ಲೆಯ ಗಿರವಿ ಅಂಗಡಿಯೊಂದರಿಂದ 662 ಗ್ರಾಂ, ನವೀ ಮುಂಬೈನ ಗಿರವಿ ಅಂಗಡಿಯೊಂದರಿಂದ 177 ಗ್ರಾಂ ಆಭರಣ ಸೇರಿದಂತೆ ಒಟ್ಟು 1 ಕೆಜಿ 700 ಗ್ರಾಂ ಆಭರಣವನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇದರ ಮೌಲ್ಯ ಒಂದು ಕೋಟಿ 36 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಆರೋಪಿಯ ಬಂಧನದಿಂದ ಅನ್ನಪೂರ್ಣೇಶ್ವರಿ ನಗರ ಠಾಣೆಯ 6, ಕೆಂಗೇರಿ, ಜ್ಞಾನಭಾರತಿ, ಆರ್ಎಂಸಿಯಾರ್ಡ್, ಪೀಣ್ಯ, ಬಾಣಸವಾಡಿ ಪೊಲೀಸ್ ಠಾಣೆಯ ತಲಾ ಒಂದು ಕಳವು ಪ್ರಕರಣ ಸೇರಿದಂತೆ ಒಟ್ಟು 11 ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ.

ಈ ಆರೋಪಿಯನ್ನು ಮತ್ತೆ ಉತ್ತರಪ್ರದೇಶದ ಮುರಾದಾಬಾದ್ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಗಿದೆ. ಇನ್ಸ್ಪೆಕ್ಟರ್ ಕುಮಾರ್ ನೇತೃತ್ವದ ಸಿಬ್ಬಂದಿ ತಂಡ ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿ ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News