ಬೆಂಗಳೂರು,ಸೆ.27– ತಮ ಪ್ರಭಾವ ಬಳಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ನಗರದ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಅಮೂಲ್ಯವಾದ ಸರ್ಕಾರಿ ಸ್ವತ್ತುಗಳನ್ನು ಕಬಳಿಕೆ ಮಾಡಿಕೊಂಡಿದೆ ಎಂಬ ಗಂಭೀರ ಆರೋಪ ಮಾಡಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಈ ಕುರಿತಂತೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ.
ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕ ಸುಬ್ರಮಣ್ಯೇಶ್ವರ ರಾವ್ ಅವರನ್ನು ಭೇಟಿಯಾಗಿ ದೂರು ನೀಡಿದ ನಂತರ ಮಾತ ನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬಸ್ಥರ ನೇತತ್ವದ ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ಬಹತ್ ಭೂ ಹಗರಣ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ನಾಡಿನ ಅತ್ಯಂತ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬದವರು ಭಾರತ ಸಂವಿಧಾನದ ಬಗ್ಗೆ ಸ್ಪಷ್ಟ ತಿಳುವಳಿಕೆ ಇದ್ದರೂ ಸಹ, ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಮದೇ ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂದಿದ್ದಾರೆ.
2014ರಲ್ಲಿ ಬಿಟಿಎಂ 4ನೇ ಹಂತದಲ್ಲಿ 8,002 ಚ. ಮೀ. (86,133 ಚ. ಅಡಿ) ವಿಸ್ತೀರ್ಣದ ಸಿಎ ನಿವೇಶನವನ್ನು ಶೈಕ್ಷಣಿಕ ಉದ್ದೇಶಕ್ಕೆಂದು ಬಿಡಿಎಯಿಂದ 30 ವರ್ಷಗಳ ಗುತ್ತಿಗೆಗೆ ಪಡೆದಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಸಂಸ್ಥೆಯು ಈ ವಿಷಯವನ್ನು ಮರೆ ಮಾಚಿ ಇದೀಗ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಯಲಹಂಕ ಬಳಿಯ ಬಾಗಲೂರಿನ ಹೈಟೆಕ್ ಡಿಫೆನ್‌್ಸ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಪಾರ್ಕ್ ನಲ್ಲಿ 05 ಎಕರೆ ವಿಸ್ತೀರ್ಣದ ಸಿಎ ನಿವೇಶನವನ್ನು ಮಂಜೂರು ಮಾಡಿಸಿ ಕೊಳ್ಳುವ ಮೂಲಕ ಕಾನೂನು ಬಾಹಿರ ಕಾರ್ಯವನ್ನು ಎಸಗಿದೆ.
ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ಮಾರುತಿ ರಾವ್ ಡಿ. ಮಾಲೆ, ಶಾಂತಪ್ಪ, ಸಾಯಬಣ್ಣ ಅವರನ್ನೊಳಗೊಂಡ ಸಿದ್ಧಾರ್ಥ ವಿಹಾರ ಟ್ರಸ್ಟ್ ಎಂಬ ಸಂಸ್ಥೆಯನ್ನು ಗುಲ್ಬರ್ಗ ಜಿಲ್ಲೆಯ ಕುಸನೂರು ಗ್ರಾಮದ ವಿಳಾಸದಲ್ಲಿ 1994 ರಲ್ಲಿ ಪ್ರಾರಂಭಿಸಿದ ನಂತರ, ಟ್ರಸ್ಟ್ ಮೂಲಕ ಬೆಂಗಳೂರು ಮಹಾನಗರದಲ್ಲಿ ಶೈಕ್ಷಣಿಕ ಸಂಸ್ಥೆ ಯನ್ನು ಪ್ರಾರಂಭಿಸುವ ಉದ್ದೇಶ ದಿಂದ 2009ರಲ್ಲಿ ಬಿಡಿಎಯಲ್ಲಿ ಸಿವ ನಿವೇಶನ ಹಂಚಿಕೆ ಮಾಡುವಂತೆ ಅರ್ಜಿ ಸಲ್ಲಿಸಿರುತ್ತಾರೆ.
ಸಿಎ ನಿವೇಶನಕ್ಕಾಗಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ಯನ್ನು ಪುರಸ್ಕರಿಸಿದ್ದ ಬೆಂಗಳೂರು ಅಭಿವದ್ಧಿ ಪ್ರಾಧಿಕಾರ ಮೊದಲಿಗೆ ಬನಶಂಕರಿ 6ನೇ ಹಂತ, 5ನೇ ಬ್ಲಾಕ್ ನಲ್ಲಿರುವ 8,125 ಚ. ಮೀಟರ್ ವಿಸ್ತೀರ್ಣದ ಸಿವ ನಿವೇಶನ ಸಂಖ್ಯೆ 3 ಅನ್ನು ಹಂಚಿಕೆ ಮಾಡಿ 2010 ರಂದು ಹಂಚಿಕೆ ಪತ್ರ ನೀಡಿರುತ್ತದೆ.
ಸಿದ್ಧಾರ್ಥ ವಿಹಾರ ಟ್ರಸ್ಟ್ ಟ್ರಸ್ಟೀಗಳಲ್ಲಿ ಒಬ್ಬರಾದ ರಾಧಾಕಷ್ಣರವರು ಬನಶಂಕರಿ 6ನೇ ಹಂತದ 5ನೇ ಬ್ಲಾಕ್ ನ ಸಿಎ ನಿವೇಶನ ಸಂಖ್ಯೆ – 03 ಕ್ಕೆ ಬದಲಾಗಿ ಈಗಾಗಲೇ ಅಭಿವದ್ಧಿಗೊಂಡಿರುವ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡುವಂತೆ ಬೆಂಗಳೂರು ಅಭಿವದ್ಧಿ ಪ್ರಾಧಿಕಾರಕ್ಕೆ ಮನವಿ ಪತ್ರ ಸಲ್ಲಿಸುತ್ತಾರೆ. ಸದರಿ ಮನವಿ ಪತ್ರದಲ್ಲಿ ಬೆಂಗಳೂರು ಮಹಾನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಬಿಟಿಎಂ 4ನೇ ಹಂತದ 2ನೇ ಬ್ಲಾಕ್‌ನ ಸಿಎ ನಿವೇಶನ ಸಂಖ್ಯೆ – 05 ಅನ್ನು ಬದಲಿ ನಿವೇಶನದ ಹೆಸರಿನಲ್ಲಿ ಹಂಚಿಕೆ ಮಾಡಲಾಗುತ್ತದೆ.
ಸದರಿ ಬಿಟಿಎಂ 4ನೇ ಹಂತದ ಸಿಎ ನಿವೇಶನವನ್ನು ಸಿದ್ಧಾರ್ಥ ವಿಹಾರ ಟ್ರ್ಟ್‌ನ ಕಾರ್ಯದರ್ಶಿ ಮಾರುತಿ ರಾವ್ ಡಿ. ಮಾಲೆ ಅವರ ಹೆಸರಿಗೆ 2014 ರಂದು ಬಿಡಿಎ ಸ್ವಾಧೀನ ಪತ್ರ ನೀಡಿರುತ್ತದೆ.
ಪ್ರಸ್ತುತ 130 ಕೋಟಿ ರೂ. ಬೆಲೆ ಬಾಳುವ ಈ ಆಸ್ತಿಗೆ ಬಿಬಿಎಂಪಿ ಯಿಂದ ಖಾತಾ ಕೂಡ ಮಾಡಿ ಕೊಡಲಾಗಿದೆ. ಈ ಸಮಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದರೆ, ಖರ್ಗೆ ಅವರು ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದೇ ಸಂಸ್ಥೆಯ ಹೆಸರಿಗೆ – ಒಂದೇ ಉದ್ದೇಶಕ್ಕಾಗಿ – ಒಂದಕ್ಕಿಂತ ಹೆಚ್ಚು ಸರ್ಕಾರೀ ಸ್ವತ್ತನ್ನು ಪಡೆಯುವುದು ಕಾನೂನು ಸಮತವಲ್ಲದ ಕಾರ್ಯ ಎಂಬ ಸ್ಪಷ್ಟ ಅರಿವು ಇದ್ದರೂ ಟ್ರಸ್ಟ್‌ನವರು 2024ರ ಮಾರ್ಚ್ ತಿಂಗಳಿನಲ್ಲಿ ಕೆಐಎಡಿಬಿಗೆ ಅರ್ಜಿ ಸಲ್ಲಿಸಿ ಬಾಗಲೂರಿನಲ್ಲಿ ಅಭಿವದ್ಧಿ ಪಡಿಸಿರುವ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಸಿಎ ನಿವೇಶನವನ್ನು ಹಂಚಿಕೆ ಮಾಡುವಂತೆ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿ ಸಲಾಗಿದೆ.
ಸದರಿ ಸ್ವತ್ತಿಗೆ ಗುತ್ತಿಗೆ ಮೊತ್ತ 14,25,00,000 ರೂ. ಗಳನ್ನು ನಿಗದಿ ಪಡಿಸಿ 30 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ. ಆದರೆ ಹಂಚಿಕೆಯಾಗಿರುವ 5 ಎಕರೆ ಮೌಲ್ಯದ ಆಸ್ತಿ ಮೌಲ್ಯದ ಸದ್ಯದ ಬೆಲೆ 110 ಕೋಟಿ ರೂ.ಗಳಾಗಿರುವುದು ವಿಶೇಷ.
ಒಂದೇ ಸಂಸ್ಥೆಯ ಹೆಸರಿಗೆ ಒಟ್ಟು 240 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಎರಡು ಸಿಎ ನಿವೇಶನಗಳನ್ನು ಬಿಡಿಎ ಮತ್ತು ಕೆಐಎಡಿಬಿ ಸರ್ಕಾರಿ ಸಂಸ್ಥೆಗಳಿಂದ ಹಂಚಿಕೆ ಮಾಡಿಸಿಕೊಳ್ಳುವ ಮೂಲಕ ಮಹಾ ವಂಚನೆ ಮಾಡಿರುವ ಟ್ರಸ್ಟ್ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿಗೆ ಹಂಚಿಕೆ ಮಾಡಿರುವ ಕೈಗಾರಿಕಾ ಸಚಿವ ಎಂ.ಬಿ .ಪಾಟೀಲ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ಮತ್ತಿತರ ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ವಂಚನೆ, ಮತ್ತು ಸರ್ಕಾರಿ ಭೂ ಕಬಳಿಕೆಗೆ ಸಹಕಾರ ಪ್ರಕರಣಗಳನ್ನು ದಾಖಲಿಸಲಾಗಿದೆ. ಜೊತೆಗೆ ರಾಜ್ಯಪಾಲರಿಗೂ ಸಂಪೂರ್ಣ ದಾಖಲೆ ನೀಡಲಾಗಿದೆ ಎಂದು ರಮೇಶ್ ಹೇಳಿದರು.