Sunday, October 6, 2024
Homeರಾಷ್ಟ್ರೀಯ | Nationalಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂ ವರ್ಗಾವಣೆಗೆ ಮುಂದಾಗಿದ್ದ ಸುಪ್ರೀಂ ಕೊಲಿಜಿಯಂ

ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂ ವರ್ಗಾವಣೆಗೆ ಮುಂದಾಗಿದ್ದ ಸುಪ್ರೀಂ ಕೊಲಿಜಿಯಂ

SC's collegium mulled transfer of Karnataka judge

ನವದೆಹಲಿ,ಸೆ.27– ಬೆಂಗಳೂರಿನ ಪ್ರದೇಶವೊಂದನ್ನು ಪಾಕಿಸ್ತಾನ ಎಂದು ಕರೆಯುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದಲ್ಲದೆ, ಸುಪ್ರೀಂ ಕೋರ್ಟ್‌ನ ಅಸಮಾಧಾನಕ್ಕೆ ಕಾರಣರಾದ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರನ್ನು ವರ್ಗಾವಣೆ ಮಾಡಲು ಸುಪ್ರೀಂಕೋರ್ಟ್‌ ಕೊಲಿಜಿಯಂ ಮುಂದಾಗಿತ್ತು ಎಂಬುದು ಇದೀಗ ಬೆಳಕಿಗೆ ಬಂದಿದೆ.

ನ್ಯಾಯಮೂರ್ತಿ ಶ್ರೀಶಾನಂದ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸುಪ್ರೀಂಕೋರ್ಟ್‌, ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ವಿಚಾರಣೆ ನಡೆಸಿತ್ತು.

ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಬಿಆರ್‌ ಗವಾಯ್‌, ಸೂರ್ಯಕಾಂತ್‌ ಮತ್ತು ಹೃಷಿಕೇಶ್‌ ರಾಯ್‌ ಒಳಗೊಂಡ ಪೀಠವು ಸೆ.20ರಂದು ಶ್ರೀಶಾನಂದ ಅವರ ಹೇಳಿಕೆಯನ್ನು ವಿಚಾರಣೆಗೆ ಎತ್ತಿಕೊಂಡಿತ್ತು.

ಶ್ರೀಶಾನಂದರವರ ಕ್ಷಮೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಂತ್ಯಗೊಳಿಸಲು ಸೆ.25ರಂದು ನಿರ್ಧರಿಸಿದ್ದ ನ್ಯಾಯಪೀಠದಲ್ಲಿದ್ದ ಇದೇ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಿಜಿಯಂ, ಅವರನ್ನು ತಮ ರಾಜ್ಯವಾದ ಕರ್ನಾಟಕದಿಂದ ಹೊರಗಿನ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಆಯ್ಕೆಯತ್ತ ಒಲವು ಪ್ರದರ್ಶಿಸಿತ್ತು.

ನ್ಯಾಯಮೂರ್ತಿ ವಿರುದ್ಧ ಹಲವು ಆರೋಪ:
ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ ಅವರ ಸಲಹೆಯೊಂದಿಗೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು ಸೆ 23ರಂದು ವರದಿ ಸಿದ್ಧಪಡಿಸಿದ್ದರು. ಇದರಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ಅವರು ಈ ಹಿಂದೆ ನೀಡಿದ್ದ ಅನಗತ್ಯ ಮತ್ತು ಔಚಿತ್ಯಪೂರ್ಣವಲ್ಲದ ಅನೇಕ ಹೇಳಿಕೆಗಳನ್ನು ಉಲ್ಲೇಖಿಸಲಾಗಿತ್ತು. ಅಂತಹ ಹೇಳಿಕೆಗಳಿಗೆ ಸುಪ್ರೀಂಕೋರ್ಟ್‌ನ ಕಠಿಣ ಆಕ್ಷೇಪ ವ್ಯಕ್ತಪಡಿಸಲು ಶ್ರೀಶಾನಂದ ಅವರನ್ನು ಬೇರೆ ಹೈಕೋರ್ಟ್‌ಗೆ ವರ್ಗಾವಣೆ ಮಾಡುವುದೇ ಸೂಕ್ತ ಎಂದು ಐವರು ಸದಸ್ಯರ ಕೊಲಿಜಿಯಂ ಅಭಿಪ್ರಾಯಪಟ್ಟಿತ್ತು.

ಆದರೆ ಜೂನ್‌ 6ರಂದು ನೀಡಿದ್ದ ಲಿಂಗ ಸೂಕ್ಷ್ಮತೆಯ ಹೇಳಿಕೆ ಹಾಗೂ ಆ.28ರಂದು ಬೆಂಗಳೂರಿನ ಸ್ಥಳವೊಂದನ್ನು ಪಾಕಿಸ್ತಾನದ ಭಾಗ ಎಂಬ ಹೇಳಿಕೆ ವಿವಾದಗಳನ್ನು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಮರುದಿನ, ಸೆ.21ರಂದು ಭೋಜನದ ನಂತರ ನ್ಯಾಯಾಲಯದ ಕಲಾಪದ ಸಂದರ್ಭದಲ್ಲಿ ಶ್ರೀಶಾನಂದ ಅವರು ತಮ ಹೇಳಿಕೆಯು ಉದ್ದೇಶಪೂರ್ವಕವಾಗಿರಲಿಲ್ಲ ಎಂದಿದ್ದರು. ಅಲ್ಲದೆ ತೆರೆದ ನ್ಯಾಯಾಲಯದಲ್ಲಿ ಕ್ಷಮಾಪಣೆ ಕೋರಿದ್ದರು.

ವರ್ಗಾವಣೆಗೆ ವಿರೋಧ ಬಂದಿದ್ದೇಕೆ?:
ಶ್ರೀಶಾನಂದ ಅವರ ಕ್ಷಮೆ ಹಾಗೂ ತಪ್ಪು ತಿದ್ದಿಕೊಳ್ಳುವ ಭರವಸೆ ಗಮನಿಸಿದ ಕೊಲಿಜಿಯಂನ ಕೆಲವು ನ್ಯಾಯಮೂರ್ತಿಗಳು, ಮೂರು ಕಾರಣಗಳಿಂದ ಅವರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದು, ಶ್ರೀಶಾನಂದ ಅವರು ತಮ ಪ್ರಮಾದವನ್ನು ಅರ್ಥಮಾಡಿಕೊಂಡು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಜತೆಗೆ ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ನೋಯಿಸಲು ಬಯಸಿರಲಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಹಾಗೆಯೇ ಕ್ಷಮಾಪಣೆ ಕೋರಿರುವ ಸುಮೊಟೊ ಪ್ರಕರಣವನ್ನು ತೀವ್ರ ಸ್ವರೂಪದಲ್ಲದ ಪ್ರಕರಣ ಎಂದು ಪರಿಗಣಿಸಬೇಕು ಎಂದು ಕೊಲಿಜಿಯಂ ಸದಸ್ಯರು ಹೇಳಿದ್ದರು.ನ್ಯಾಯಮೂರ್ತಿಗಳ ವರ್ಗಾವಣೆಯು, ಮುಕ್ತವಾಗಿ ಮಾತನಾಡುವ ನ್ಯಾಯಮೂರ್ತಿಗಳ ವರ್ಗಾವಣೆಗಳಿಗೆ ಪೂರ್ವ ನಿದರ್ಶನ ಹಾಕಿಕೊಟ್ಟಂತೆ ಆಗಲಿದೆ. ಅಲ್ಲದೆ ವಿವಾದಾತಕ ಎನಿಸುವಂತಹ ಹೇಳಿಕೆಗಳನ್ನು ಮಾತ್ರ ಆಯ್ದುಕೊಂಡು, ತಾವು ಇಷ್ಟಪಡದ ನ್ಯಾಯಾಧೀಶರ ವಿರುದ್ಧ ಆಂದೋಲನ ರೂಪಿಸಲು ದುರ್ಬಳಕೆ ಮಾಡಿಕೊಳ್ಳುವ ಕಿಡಿಗೇಡಿಕೆಗಳಿಗೆ ಪ್ರಚೋದನೆ ನೀಡಲು ಪ್ರೋತ್ಸಾಹ ಕೊಟ್ಟಂತಾಗಲಿದೆ ಎಂದು ಕೊಲಿಜಿಯಂ ಎಚ್ಚರಿಕೆ ನೀಡಿದೆ.

ಶ್ರೀಶಾನಂದ ಅವರ ವರ್ಗಾವಣೆ ಕುರಿತು ಒಮತಕ್ಕೆ ಬರುವಲ್ಲಿ ಕೊಲಿಜಿಯಂ ವಿಫಲವಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25 ರಂದು ನ್ಯಾಯಪೀಠವು ಸ್ವಯಂಪ್ರೇರಿತ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆಗೆ ತಾರ್ಕಿಕ ಅಂತ್ಯ ನೀಡಲು ಮುಂದಾಯಿತು ಎನ್ನಲಾಗಿದೆ.

RELATED ARTICLES

Latest News