Sunday, October 6, 2024
Homeರಾಜಕೀಯ | Politicsಮುಡಾ ಸಣ್ಣ ಪ್ರಕರಣ : ಸಿಎಂ ಬೆನ್ನಿಗೆ ನಿಂತ ಮಲ್ಲಿಕಾರ್ಜುನ ಖರ್ಗೆ

ಮುಡಾ ಸಣ್ಣ ಪ್ರಕರಣ : ಸಿಎಂ ಬೆನ್ನಿಗೆ ನಿಂತ ಮಲ್ಲಿಕಾರ್ಜುನ ಖರ್ಗೆ

Mallikarjun Kharge's first reaction on probe against Siddaramaiah in MUDA case

ಬೆಂಗಳೂರು,ಸೆ.27– ಉದ್ಯಮಿಗಳ 16 ಲಕ್ಷ ಕೋಟಿ ಸಾಲವನ್ನು ರೈಟ್‌ ಆಫ್‌ ಮಾಡಲಾಗಿದೆ. ಕೋಟ್ಯಂತರ ರೂ. ನಷ್ಟವನ್ನು ಕಡೆಗಣಿಸಿ ಸಣ್ಣಪ್ರಮಾಣದ ಮುಡಾ ಪ್ರಕರಣವನ್ನು ಪ್ರತಿನಿತ್ಯ ಚರ್ಚಿಸಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಹೈಕಮಾಂಡ್‌ ಇದೆ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೂ ತೆರೆ ಎಳೆದಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗುವ ಹಂತದಲ್ಲಿ ಹೈಕಮಾಂಡ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ಈ ಹೇಳಿಕೆಗಳು ರಾಜಕೀಯವಾಗಿ ಭುಗಿಲೆದ್ದಿದ್ದ ಚರ್ಚೆಗಳಿಗೆ ತೆರೆ ಎಳೆದಿವೆ.

ಮುಡಾ ಪ್ರಕರಣದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿಲ್ಲ. ದೋಷಿ ಎಂದೂ ಕೂಡ ತೀರ್ಮಾನವಾಗಿಲ್ಲ. ಆದರೂ ಪ್ರತಿದಿನ ಈ ಕುರಿತೇ ಹೆಚ್ಚು ಚರ್ಚೆಯಾಗುತ್ತಿದೆ. ಈ ಮೂಲಕ ಕಾಂಗ್ರೆಸ್‌‍ ಪಕ್ಷದ ವರ್ಚಸ್ಸನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾ ಹತ್ಯಾಕಾಂಡ ನಡೆದಿತ್ತು. ಆ ವೇಳೆ ಅವರು ರಾಜೀನಾಮೆ ನೀಡಿದ್ದರೇ? ಅಮಿತ್ ಷಾ ವಿರುದ್ಧವೂ ಹಲವು ಪ್ರಕರಣಗಳು ಬಾಕಿ ಇದ್ದವು. ಅವರೂ ಕೂಡ ರಾಜೀನಾಮೆ ನೀಡಿರಲಿಲ್ಲ. ಬಿಜೆಪಿಯವರು ಯಾವುದೋ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ವ್ಯಕ್ತಿಯ ವರ್ಚಸ್ಸನ್ನು ಹಾಳು ಮಾಡುವ ಮೂಲಕ ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟು ಮಾಡುವ ಹುನ್ನಾರಗಳನ್ನು ಬಿಜೆಪಿ ನಡೆಸಿದೆ. ಬಿಜೆಪಿಯ ಕೇಂದ್ರ ನಾಯಕರ ಗುರಿ ಕಾಂಗ್ರೆಸ್‌‍ ಪಕ್ಷವಾಗಿದೆ. ವ್ಯಕ್ತಿಗತ ಗುರಿಯಿಲ್ಲ. ಏನೇ ಆದರೂ ಪಕ್ಷ ಮುಂದುವರೆಯುತ್ತದೆ. ನಮ ಪಕ್ಷವನ್ನು ಮುಗಿಸಲು ಮೂಲ ಮತಬ್ಯಾಂಕನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಈ ಎಲ್ಲಾ ಪ್ರತಿಭಟನೆಗಳು, ಚರ್ಚೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ತನ್ನ ನಿರ್ಧಾರವನ್ನು ತೆಗೆದುಕೊಳ್ಳಲಿ. ಆ ಸಂದರ್ಭ ಎದುರಾದಾಗ ನಾವು ಪರಿಶೀಲನೆ ನಡೆಸುತ್ತೇವೆ. ಈಗ ಏನೂ ಇಲ್ಲ. ಆದರೂ ಪ್ರತಿದಿನ ಮುಡಾ … ಮುಡಾ… ಎಂದು ಚರ್ಚೆಗಳಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದ್ಯಮಿಗಳ 14 ಲಕ್ಷ ಕೋಟಿ ರೂ.ಗಳ ಸಾಲವನ್ನು ರೈಟ್‌ ಆಫ್‌ ಹೆಸರಿನಲ್ಲಿ ಮನ್ನಾ ಮಾಡಲಾಗಿದೆ. ಅದನ್ನು ಮರೆತು ದೋಷಾರೋಪಣ ಪಟ್ಟಿಯೂ ಸಲ್ಲಿಕೆಯಾಗಿಲ್ಲ, ಶಿಕ್ಷೆಯೂ ಘೋಷಣೆಯಾಗದಿರುವ ಸಣ್ಣ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿದಿನ ಹೋರಾಟ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಿಬಿಐ ತನಿಖೆಗಿಂತ ಮುಕ್ತ ಅವಕಾಶವನ್ನು ಮೊಟಕುಗೊಳಿಸುವ ರಾಜ್ಯ ಸಚಿವ ಸಂಪುಟದ ನಿರ್ಣಯವನ್ನು ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಇದು ಹೊಸದಲ್ಲ. ಈ ಹಿಂದೆ ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದಾಗಲೂ ಇಂತಹ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಸಿಬಿಐ ತನಿಖೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಾಗ ತನಿಖೆಯ ಮುಕ್ತ ಅವಕಾಶವನ್ನು ಹಿಂಪಡೆಯಲಾಗಿತ್ತು ಎಂದು ಹೇಳಿದರು.

ತಮಿಳುನಾಡಿನ ವೀರಪ್ಪನ್‌ ಮತ್ತು ಸ್ಟಾಂಪ್‌ ಹಗರಣದ ಆರೋಪಿ ತೆಲಗಿ ಮತ್ತು ಕೋಲಾರದ ದಲಿತರ ಸಜೀವ ದಹನ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ನಾನು ಗೃಹಸಚಿವನಾಗಿದ್ದಾಗ ಶಿಫಾರಸ್ಸು ಮಾಡಿದ್ದೆ.

ಆದರೆ ರಾಜ್ಯಸರ್ಕಾರದ ತನಿಖೆಯೇ ಸರಿಯಾಗಿದೆ ಎಂದು ಹೇಳಿ ಸಿಬಿಐ ತನಿಖೆಗೆ ಮುಂದಾಗಲಿಲ್ಲ. ವೀರಪ್ಪನ್‌ ಕರ್ನಾಟಕ, ತಮಿಳುನಾಡು ಸೇರಿ 2 ರಾಜ್ಯಗಳಲ್ಲಿ ನೂರಾರು ಜನರನ್ನು ಕೊಂದಿದ್ದ. ಸ್ಟಾಂಪ್‌ ಹಗರಣದಲ್ಲಿ ನೂರಾರು ಕೋಟಿ ರೂ.ಗಳ ನಷ್ಟವಾಗಿತ್ತು.
ಈ ಪ್ರಕರಣಗಳಲ್ಲಿ ಅಂತಾರಾಜ್ಯ ವ್ಯಾಪ್ತಿ ಇದ್ದುದರಿಂದ ಸಿಬಿಐ ತನಿಖೆ ಅಗತ್ಯ ಎಂದು ನಾನು ಶಿಫಾರಸ್ಸು ಮಾಡಿದಾಗ ಸಿಬಿಐ ಸಿದ್ಧವಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಬಿಐಗೆ ತನಿಖೆ ಒಪ್ಪಿಸಬೇಕೇ, ಬೇಡವೇ ಎಂದು ರಾಜ್ಯಸರ್ಕಾರದ ವಿವೇಚನೆಗೆ ಒಳಪಟ್ಟಿದೆ ಎಂದು ಖರ್ಗೆ ಸಮರ್ಥಿಸಿಕೊಂಡರು. ರಾಜಭವನ ಹಾಗೂ ರಾಜ್ಯಸರ್ಕಾರದ ನಡುವಿನ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

RELATED ARTICLES

Latest News