Thursday, November 21, 2024
Homeರಾಜ್ಯದರ್ಶನ್ ಚಟುವಟಿಕೆಗಳ ಮೇಲೆ ಕಣ್ಣಿಡಲು ಸೂಚನೆ

ದರ್ಶನ್ ಚಟುವಟಿಕೆಗಳ ಮೇಲೆ ಕಣ್ಣಿಡಲು ಸೂಚನೆ

nstruction to monitor Darshan activities

ಬೆಂಗಳೂರು,ಆ.29- ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ಗೆ ಪ್ರತ್ಯೇಕ ಕೊಠಡಿಯಲ್ಲಿರಿಸಿ ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲು ದಿನದ 24 ಗಂಟೆಗಳ ಕಾಲ ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲು ಸೇರಿದಂತೆ ಹಲವು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿರುವ ಉತ್ತರ ವಲಯದ ಕಾರಾಗೃಹಗಳ ಉಪ ಮಹಾನಿರೀಕ್ಷಕರು, ಬಳ್ಳಾರಿ ಕಾರಾಗೃಹದ ಅಧೀಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ರಾಜಾತಿಥ್ಯ ಅನುಭವಿಸಿದ್ದರು ಎಂಬ ಆರೋಪಗಳು, ಬಹಿರಂಗಗೊಂಡಿದ್ದ ವಿಡಿಯೋಗಳಿಂದಾಗಿ ನ್ಯಾಯಾಲಯದ ಆದೇಶದ ಮೇರೆಗೆ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿದೆ.
ದರ್ಶನ್ರನ್ನು ಇರಿಸಿರುವ ಬಂಧೀಖಾನೆಯಲ್ಲಿ ಸೆರೆ ಹಿಡಿಯಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರತಿನಿತ್ಯ ಮುಂಜಾಗ್ರತಾ ಕ್ರಮವಾಗಿ ಶೇಖರಣೆ ಮಾಡಿಡಬೇಕು.

ದರ್ಶನ್ ಇರುವ ಬಂಧೀಖಾನೆ ವಿಭಾಗದ ಕರ್ತವ್ಯಕ್ಕೆ ಮುಖ್ಯ ವೀಕ್ಷಕ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ಅನುಭವವುಳ್ಳ ಸಿಬ್ಬಂದಿ ವರ್ಗದವರನ್ನು ಪಹರೆ ಕರ್ತವ್ಯಕ್ಕೆ ನಿಯೋಜಿಸುವುದು.

ದರ್ಶನ್ ಇರುವ ಬಂಧೀಖಾನೆಯ ವಿಭಾಗಕ್ಕೆ ಜೈಲರ್ ಮತ್ತು ಹಿರಿಯ ಅಧಿಕಾರಿ ವರ್ಗದವರು ಪ್ರತಿನಿತ್ಯ ಭೇಟಿ ನೀಡಿ ಭದ್ರತೆ ಹಾಗೂ ಬಂಧಿಯ ಚಲನವಲನಗಳನ್ನು ಗಮನಿಸಿ ಪಹರೆಯಲ್ಲಿರುವ ಕರ್ತವ್ಯದ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೆಲವು ಸೂಚನೆಯನ್ನು ನೀಡಲಾಗಿದೆ.

ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಆಡಳಿತ ಮತ್ತು ಭದ್ರತೆಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕಾರಾಗೃಹದ ಆಡಳಿತ ವೈಫಲ್ಯದ ಬಗ್ಗೆ ಲಿಖಿತವಾಗಿ ಅಥವಾ ಸುದ್ದಿಮಾದ್ಯಮದಲ್ಲಿ ಪ್ರಸಾರಗೊಂಡ ಪಕ್ಷದಲ್ಲಿ ಮುಖ್ಯಸ್ಥರನ್ನೇ ನೇರ ಹೊಣೆಗಾರರನ್ನಾಗಿಸಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸೂಚಿಸಿದ್ದಾರೆ.

ದರ್ಶನ್ ಬಳ್ಳಾರಿ ಜೈಲಿಗೆ ಕಾಲಿಡುತ್ತಿದ್ದಂತೆಯೇ ಕಾರಾಗೃಹಗಳ ಉಪ ಮಹಾ ನಿರೀಕ್ಷಕರು ನೀಡಿರುವ ಈ ಸೂಚನೆಗಳು ಭಾರಿ ಕುತೂಹಲ ಕೆರಳಿಸಿವೆ.

RELATED ARTICLES

Latest News