Monday, September 16, 2024
Homeರಾಜ್ಯಸಿನಿಮಾ ಸ್ಟೈಲ್‌ನಲ್ಲೇ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ

ಸಿನಿಮಾ ಸ್ಟೈಲ್‌ನಲ್ಲೇ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ

Actor Darshan transferred to Bellary central jail amid tight security

ಬೆಂಗಳೂರು,ಆ.29- ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಖ್ಯಾತ ಚಿತ್ರ ನಟ ಡಿ ಬಾಸ್‌‍ ದರ್ಶನ್‌ ಅವರನ್ನು ಸಿನಿಮಾ ಸ್ಟೈಲ್‌ನಲ್ಲೇ ಅವರ ಅಭಿಮಾನಿಗಳು ಮತ್ತು ಪತ್ರಕರ್ತರ ಕಣ್ತಪ್ಪಿಸಿ ಪರಪ್ಪನ ಅಗ್ರಹಾರ ಬಂಧಿಖಾನೆಯಿಂದ ಬಳ್ಳಾರಿ ಜೈಲಿಗೆ ವರ್ಗಾಯಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜೈಲಿನಲ್ಲಿ ದರ್ಶನ್‌ ರೌಡಿ ಗ್ಯಾಂಗ್‌ನೊಂದಿಗೆ ನಡೆಸುತ್ತಿದ್ದ ಮೋಜು ಮಸ್ತಿಯ ವಿಷಯ ಬಹಿರಂಗವಾಗುತ್ತಿದ್ದಂತೆ ಸರ್ಕಾರ ನ್ಯಾಯಲಯದ ಅನುಮತಿ ಪಡೆದು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಿತ್ತು. ಜೈಲು ವರ್ಗಾವಣೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕರೂ ದರ್ಶನ್ ಅವರನ್ನು ಬಳ್ಳಾರಿಗೆ ಸ್ಥಳಾಂತರಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸ್ವಲ್ಪ ಹೆಚ್ಚು ಕಮಿಯಾದರೂ ಮತ್ತೆ ಪೊಲೀಸರೇ ಅದಕ್ಕೆ ಹೊಣೆಗಾರರಾಗಬೇಕಿತ್ತು.

ಹೀಗಾಗಿ ಯಾರಿಗೂ ತಿಳಿಯದಂತೆ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಪೊಲೀಸರು ಮಾಸ್ಟರ್‌ ಪ್ಲಾನ್‌ ಒಂದನ್ನು ಸಿದ್ದಪಡಿಸಿಕೊಂಡು ಕೊಲೆ ಪ್ರಕರಣದಲ್ಲಿ ಖಳನಾಯಕನಾಗಿರುವ ದರ್ಶನ್‌ ಅವರನ್ನು ಸಿನಿಮಾ ಸ್ಟೈಲ್‌ನಲ್ಲೇ ಬಳ್ಳಾರಿಗೆ ಸ್ಥಳಾಂತರಿಸುವ ಪ್ಲಾನ್‌ ರೂಪಿಸಿದರು.

ಏನದು ಮಾಸ್ಟರ್‌ ಪ್ಲಾನ್‌: ದರ್ಶನ್‌ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ಅವರ ಊರು ಚಿತ್ರದುರ್ಗ ಹೀಗಾಗಿ ದರ್ಶನ್‌ ಅವರನ್ನು ಅದೇ ಮಾರ್ಗವಾಗಿ ಬಳ್ಳಾರಿಗೆ ಕರೆದೊಯ್ದರೆ ಏನಾದರೂ ಅನಾಹುತ ಸಂಭವಿಸಬಹುದು ಎಂಬ ದೂರಾಲೋಚನೆ ಮಾಡಿದ ಖಾಕಿ ಪಡೆ ಅದಕ್ಕಾಗಿಯೇ ಒಂದು ಮಾಸ್ಟರ್‌ ಪ್ಲಾನ್‌ ಸಿದ್ದಪಡಿಸಿತು.

ಹಲಸೂರು ಉಪವಿಭಾಗದ ಎಸಿಪಿ ರಂಗಪ್ಪ ನೇತೃತ್ವದ ಒಂದು ತಂಡ ದರ್ಶನ್‌ ಅವರನ್ನು ತುಮಕೂರು-ಶಿರಾ-ಚಿತ್ರದುರ್ಗದ ಮಾರ್ಗದಲ್ಲಿ ದರ್ಶನ್‌ ಅವರನ್ನು ಬಳ್ಳಾರಿಗೆ ಕರೆದೊಯ್ಯಲು ತೀರ್ಮಾನಿಸಲಾಯಿತು.
ಅದೇ ಸಂದರ್ಭದಲ್ಲಿ ಎಸಿಪಿ ಸದಾನಂದ ತಿಪ್ಪಣವರ್‌ ನೇತೃತ್ವದ ಮತ್ತೊಂದು ಪೊಲೀಸ್‌‍ ತಂಡವೂ ಬಿಗಿ ಭದ್ರತೆಯಲ್ಲಿ ಚಿಕ್ಕಬಳ್ಳಾಪುರ-ಆನಂತಪುರ-ಮೋಕಾ ಮಾರ್ಗವಾಗಿ ಬಳ್ಳಾರಿಗೆ ಪ್ರಯಾಣ ಬೆಳೆಸಿತು.

ಈ ಎರಡು ಪೊಲೀಸ್‌‍ ತಂಡದಲ್ಲಿ ದರ್ಶನ್‌ ಅವರನ್ನು ಯಾವ ತಂಡದ ಜೊತೆ ಬಳ್ಳಾರಿಗೆ ಕರೆದೊಯ್ಯಲಾಗುತ್ತಿದೆ ಎಂಬ ವಿಚಾರ ಪೊಲೀಸರಿಗೆ ಬಿಟ್ಟರೆ ಬೇರೆ ಯಾರಿಗೂ ತಿಳಿದಿರಲಿಲ್ಲ.

ಇಬ್ಬರು ಎಸಿಪಿಗಳ ನೇತೃತ್ವದ ತಂಡಗಳು ಸಿನಿಮಾ ಸ್ಟೈಲ್‌ನಂತೆ ಮಧ್ಯ ದರ್ಶನ್‌ ಇರುವ ಪೊಲೀಸ್‌‍ ವ್ಯಾನ್‌ ಅದರ ರಕ್ಷಣೆಗಾಗಿ ಮುಂದೆ ಎರಡು ಜೀಪ್‌ ಹಾಗೂ ಹಿಂದೆ ಎರಡು ಜೀಪ್‌ಗಳಲ್ಲಿ ತಮ ಪ್ರಯಾಣ ಆರಂಭಿಸಿದವು. ಎರಡು ಮಾರ್ಗದ ಪ್ರಯಾಣ ಒಂದೇ ಸಮಯದಲ್ಲಿ ಆರಂಭವಾದರೂ ಬಳ್ಳಾರಿ ತಲುಪುವ ಸಮಯದಲ್ಲಿ ವ್ಯತ್ಯಾಸವಿತ್ತು.

ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಸಂಚರಿಸಿದ ಟೀಮ್‌ ಬೆಳಿಗ್ಗೆ 3.45ರ ಸುಮಾರಿಗೆ ಬಳ್ಳಾರಿ ತಲುಪಿದರೆ ತುಮಕೂರು ಮಾರ್ಗದ ತಂಡ 4.30ರ ಸುಮಾರಿಗೆ ಬಳ್ಳಾರಿ ತಲುಪಿತ್ತು. ಆದರೆ ಈ ಎರಡು ವಾಹನಗಳಲ್ಲಿ ದರ್ಶನ್‌ ಅವರನ್ನು ಯಾವ ಮಾರ್ಗದಲ್ಲಿ ಬಳ್ಳಾರಿಗೆ ಕರೆದುಕೊಂಡು ಬರಲಾಯಿತು ಎಂಬುದು ಮಾತ್ರ ಯಾರಿಗೂ ಗೊತ್ತಿರಲಿಲ್ಲ.

ಚಿತ್ರದುರ್ಗದ ಮಾರ್ಗವಾಗಿ ಕರೆದುಕೊಂಡು ಬಂದರೆ ಒಂದು ವೇಳೆ ಅಲ್ಲಿ ಏನಾದರೂ ಅಪತ್ತು ಎದುರಾದರೆ ಕಷ್ಟ ಎಂಬುದನ್ನು ಮನಗಂಡ ಪೊಲೀಸರು ಚಿಕ್ಕಬಳ್ಳಾಪುರದ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪೊಲೀಸ್‌‍ ಟೀಮ್‌ನೊಂದಿಗೆ ದರ್ಶನ್‌ ಅವರನ್ನು ಸುರಕ್ಷಿತವಾಗಿ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ.

ದರ್ಶನ್‌ ಅಭಿಮಾನಿಗಳು ಬಳ್ಳಾರಿ ಜೈಲಿನ ಮುಂದೆ ಜಮಾಯಿಸಿ ತಮ ನಾಯಕನ ಪರ ಘೋಷಣೆ ಕೂಗುವ ಮುನ್ನವೇ ಡಿ ಬಾಸ್‌‍ ಅವರನ್ನು ಸಿನಿಮಾ ಸ್ಟೈಲ್‌ನಲ್ಲೇ ಬಳ್ಳಾರಿ ಜೈಲು ಮುಟ್ಟಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರ ಕಾರ್ಯಚರಣೆಯನ್ನು ಹಿರಿಯ ಪೊಲೀಸ್‌‍ ಅಧಿಕಾರಿಗಳು ಹಾಗೂ ಪ್ರಜ್ಞಾವಂತ ನಾಗರೀಕರು ಶ್ಲಾಘಿಸಿದ್ದಾರೆ.

RELATED ARTICLES

Latest News