ಚಿಕ್ಕಮಗಳೂರು,ಜ.8- ಕರ್ನಾಟಕದಲ್ಲಿ ಆರು ಮಂದಿ ನಕ್ಸಲೀಯರು ಮುಖ್ಯ ವಾಹಿನಿಗೆ ಬರಲು ಸಮಯ ಕೂಡಿಬಂದಿದ್ದು, ಈ ಆರು ಮಂದಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಕರ್ನಾಟಕದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಆರೋಲಿ ಅಲಿಯಾಸ್ ಜಯಣ್ಣ, ತಮಿಳುನಾಡಿನ ಕೆ.ವಸಂತ ಮತ್ತು ಕೇರಳದ ಟಿಎನ್ ಜೀಶಾ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಮುಂಡಗಾರು ಲತಾ ವಿರುದ್ಧ 59 ಪ್ರಕರಣ, ಸುಂದರಿ ವಿರುದ್ಧ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಮೂರು ಪ್ರಕರಣಗಳು, ಜಯಣ್ಣ ಮೇಲೆ ಉಡುಪಿ, ಮಂಗಳೂರಿನಲ್ಲಿ ಮೂರು ಪ್ರಕರಣಗಳು ಹಾಗೂ ವನಜಾಕ್ಷಿ ವಿರುದ್ದ 15 ಪ್ರಕರಣಗಳು ದಾಖಲಾಗಿದ್ದರೆ ವಸಂತ್ ಹಾಗೂ ಜೀಶಾ ವಿರುದ್ಧ ಹಲವು ಕೇಸ್ಗಳಿವೆ.
ಮುಂಡಗಾರು ಲತಾ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಪಿಯುಸಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿ ಕುದುರೆಮುಖ, ವಿಮೋಚನಾ ಚಳುವಳಿ ಮುಖಾಂತರ ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿದ್ದರು.
ಅಲ್ಲದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟ ಸಮಿತಿಯ ನಾಯಕಿಯಾಗಿದ್ದಳು.
ಸುಂದರಿ:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುತ್ಲೂರಿನ ನಿವಾಸಿಯಾಗಿದ್ದ ಸುಂದರಿ ಸಹೋದರ ವಸಂತ ಅಲಿಯಾಸ್ ಆನಂದ್ ಕೂಡ ನಕ್ಸಲ್ ಆಗಿದ್ದನು. ಸಹೋದರನ ಹಿಂದೆಯೇ ಸುಂದರಿ ಕೂಡ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.
ವನಜಾಕ್ಷಿ:
ಭೂ ಮಾಲೀಕರ ವಿರುದ್ಧ ಹೋರಾಟಕ್ಕೆ ಧುಮುಕಿ ನಕ್ಸಲರ ಹಾದಿಗೆ ತುಳಿದು ವಿದ್ಯಾಭ್ಯಾಸಕ್ಕೂ ಕೊರತೆಯಾಗಿದ್ದ ವನಜಾಕ್ಷಿ ಉಳ್ಳವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ನಕ್ಸಲಿಸಂಗೆ ಸೇರಿಕೊಂಡು ಅಲ್ಲಿಂದ ಹೋರಾಟದಲ್ಲಿ ನಿರಂತರವಾಗಿ ಭಾಗಿಯಾಗಿದ್ದಾರೆ.
ಮಾರೆಪ್ಪ ಅರೋಳಿ ಅಲಿಯಾಸ್ ಜಯಣ್ಣ:
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಆರೋಳಿ ಗ್ರಾಮದ ನಿವಾಸಿಯಾ ಮಾರೆಪ್ಪ ಬಡವರ ಮೇಲೆ ಶ್ರೀಮಂತರ ದಬ್ಬಾಳಿಕೆ ವಿರೋಧಿಸಿ ನಕ್ಸಲಿಸಂಗೆ ಎಂಟ್ರಿಯಾಗಿ, ಪಶ್ಚಿಮ ಘಟಗಳ ಆದಿವಾಸಿಗಳ ಹಕ್ಕುಗಳಿಗೆ ನಕ್ಸಲ್ ಚಳುವಳಿಯಲ್ಲಿ ಪಾಲ್ಗೊಂಡು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟದಲ್ಲೂ ಸಕ್ರಿಯರಾಗಿದ್ದರು.
ಕೆ.ವಸಂತ:
ಮೂಲತಃ ತಮಿಳುನಾಡಿನವರಾಗಿರುವ ಕೆ ವಸಂತ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟದಲ್ಲಿ ಸಕ್ರಿಯರಾದ್ದರು.
ಟಿ.ಎನ್. ಜೀಶಾ:
ಕೇರಳದ ಮೂಲದವರಾಗಿದ್ದು ನಕ್ಸಲ್ ಹೋರಾಟದ ಮೂಲಕ ರಾಜ್ಯಕ್ಕೆ ಎಂಟ್ರಿ. ಕರ್ನಾಟಕದ ಕರಾವಳಿ ಭಾಗದ ಹೋರಾಟದಲ್ಲೂ ಪಾಲ್ಗೊಂಡಿದ್ದರು.