ಬೆಂಗಳೂರು,ಮಾ.22- ರಾಜ್ಯ ಒಕ್ಕಲಿಗರ ಸಂಘದ ಹೊಸ ಸದಸ್ಯತ್ವ ನೋಂದಣಿಗೆ ಅರ್ಜಿ ಸಲ್ಲಿಕೆಗೆ ಮತ್ತೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.ಆಗಸ್ಟ್ ಅಂತ್ಯದವರೆಗೂ ಹೊಸ ಸದಸ್ಯತ್ವ ಸಲ್ಲಿಕೆಗೆ ಕಾಲಾವಕಾಶ ನೀಡಿದ್ದು, ನಮ್ಮ ಸಮಾಜದವರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘದ ಸದಸ್ಯತ್ವ ಕೋರಿ ಹೊಸದಾಗಿ ಆಫ್ ಲೈನ್ ಮೂಲಕ 52,264 ಮಂದಿ ಮತ್ತು ಆನ್ ಲೈನ್ ಮೂಲಕ 10,234 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟು 62,498 ಮಂದಿ ಹೊಸದಾಗಿ ಸಂಘದ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಎರಡೂ ವಿಧಾನದ ಮೂಲಕ ಸಲ್ಲಿಕೆಯಾಗಿರುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹರೆಲ್ಲರಿಗೂ ಸಂಘದ ಆಜೀವ ಸದಸ್ಯತ್ವ ನೀಡಲಾಗುತ್ತಿದೆ ಎಂದಿದ್ದಾರೆ.
ಸದಸ್ಯತ್ವ ವಿಸ್ತರಣೆ ಮಾಡುವಂತೆ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಮತ್ತೆ ಆರು ತಿಂಗಳ ಕಾಲಾವಕಾಶ ನೀಡಲು ನಿರ್ಣಯಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ 18 ವರ್ಷ ತುಂಬಿರುವ ಒಕ್ಕಲಿಗ ಸಮುದಾಯದವರು ಅರ್ಜಿ ಸಲ್ಲಿಸಿ ಹೊಸ ಸದಸ್ಯತ್ವ ಪಡೆಯಬಹುದು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಡಿಸಿಸಿಸಿ ಬ್ಯಾಂಕ್‍ನ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ದಕ್ಷಿಣ ಕನ್ನಡ, ಕೆ.ವಿ.ಜಿ ಬ್ಯಾಂಕ್, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ, ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘ, ಹೊನ್ನಾವರ ಬೈರವಿ ಮಹಿಳಾ ಸಹಕಾರಿ ಸಂಘ, ಮತ್ತು ಸಿರಸಿ ಕೆನರಾ ಜಿಲ್ಲಾ ಕೋ-ಆಪರೇಟಿವ್ ಬ್ಯಾಂಕ್‍ಗಳಲ್ಲಿ ಸಂಘದ ಸದಸ್ಯತ್ವದ ಅರ್ಜಿಗಳನ್ನು ವಿತರಿಸಲಾಗುತ್ತದೆ.
ಅರ್ಜಿ ಸ್ವೀಕರಿಸಿದ ದಿನಾಂಕದಿಂದ 30 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಆಯಾ ಬ್ಯಾಂಕಿಗೆ ಅರ್ಜಿ ಹಿಂದಿರುಗಿಸಬೇಕು. ಅರ್ಜಿಯೊಂದಿಗೆ ವಿಳಾಸ ದೃಢೀಕರಣಕ್ಕೆ ಸಂಬಂಸಿದಂತೆ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಅಥವಾ ಶಾಲಾ ಟಿ.ಸಿ. ಮತ್ತು ಎರಡು ಇತ್ತೀಚಿನ ಭಾವಚಿತ್ರ ಸೇರಿದಂತೆ ಅರ್ಜಿಯಲ್ಲಿ ಕೋರಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ..
ಅರ್ಜಿ ಸಲ್ಲಿಕೆ ಶುಲ್ಕ 1650 ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಶುಲ್ಕವನ್ನು ಡೆಬಿಟ್ , ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಸೇರಿದಂತೆ ಆನ್‍ಲೈನ್ ವಿಧಾನ ಮೂಲಕ ಪಾವತಿ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಸಂಘದ ದೂರವಾಣಿ ಸಂಖ್ಯೆ 080-26611031 ಸಂಪರ್ಕಿಸಬಹುದಾಗಿದೆ.