ಬೆಂಗಳೂರು,ಏ.22- ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡುವ ಮುನ್ನ ಪತ್ನಿ ಪಲ್ಲವಿ ಮನುಷ್ಯನ ರಕ್ತನಾಳಗಳನ್ನು ಕತ್ತರಿಸುವ ಕುರಿತು ಗೂಗಲ್ ನೆರವು ಪಡೆದಿದ್ದರೆಂಬುದು ಬೆಳಕಿಗೆ ಬಂದಿದೆ.
ಕಳೆದ ಮೂರು ತಿಂಗಳ ಹಿಂದೆಯೇ ಓಂಪ್ರಕಾಶ್ ಕೊಲೆಗೆ ಪೂರ್ವ ತಯಾರಿ ನಡೆಸಿದ್ದ ಪಲ್ಲವಿ, ಮಾನವನ ರಕ್ತನಾಳಗಳನ್ನು ಕತ್ತರಿಸಿದರೆ ರಕ್ತಸಂಚಾರ ನಿಂತುಹೋಗುತ್ತದೆ. ಇದರಿಂದ ಸುಲಭವಾಗಿ ಪ್ರಾಣ ತೆಗೆಯಬಹುದೆಂಬ ಮುಂದಾಲೋಚನೆಯಿಂದ ಗೂಗಲ್ ನೆರವು ಪಡೆದಿದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ವಿಶೇಷವಾಗಿ ಓಂಪ್ರಕಾಶ್ ಕೊಲೆಯಾಗುವ ಮುನ್ನ 5 ದಿನಗಳ ಮುಂಚೆ ನಿರಂತರವಾಗಿ ಯೂಟೂಬ್ ಚಾನಲ್ ನೋಡುತ್ತಿದ್ದ ಪಲ್ಲವಿ, ಮನುಷ್ಯನನ್ನು ಕತ್ತ ರಿಸುವುದು, ಕೊಲೆ ಮಾಡುವುದು,
ಕೊಲೆಗೂ ಮುನ್ನ ಯಾವ ರೀತಿ ಪೂರ್ವ ತಯಾರಿ ನಡೆಸಬೇಕು, ಖಾರದ ಪುಡಿಯನ್ನು ಮುಖಕ್ಕೆ ಎರಚುವುದರಿಂದ ಉಂಟಾಗುವ ಪರಿಣಾಮ, ಮನುಷ್ಯನ ರಕ್ತನಾಳ ಕತ್ತರಿಸಿದರೆ ಯಾವ ಸಮಯಕ್ಕೆ ಅಸುನೀಗುತ್ತಾರೆ, ಎದೆಗೆ ಚುಚ್ಚಿದರೆ ಆಗಬಹುದಾದ ಅನಾಹುತ ಹೀಗೆ ಕಗ್ಗೊಲೆಯ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ.
ಈ ಮಾಹಿತಿ ಆಧಾರದ ಮೇಲೆ ಮನೆಗೆ ಕೆಜಿಗಟ್ಟಲೇ ಖಾರದ ಪುಡಿ ತಂದಿದ್ದ ಪಲ್ಲವಿ, ಭಾನುವಾರ ಮಧ್ಯಾಹ್ನ ಜೊಮಾಟೊ ಮೂಲಕ ಎರಡು ಮೀನನ್ನು ತರಿಸಿಕೊಂಡು ಊಟಕ್ಕೆ ಕೂತದ್ದ ವೇಳೆ ಏಕಾಏಕಿ ರಾಕ್ಷಸಿಯಂತೆ ಎರಗಿ ಮುಖಕ್ಕೆ ಖಾರದ ಪುಡಿ ಎರಚಿ ಕೊನೆಗೆ ಅಡುಗೆ ಎಣ್ಣೆಯನ್ನು ಮುಖಕ್ಕೆ ಎರಚ್ಚಿದ್ದಳು.
ಓಂಪ್ರಕಾಶ್ ತಪ್ಪಿಸಿಕೊಂಡು ಹೊರಹೋಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದ ಪಲ್ಲವಿ, ಖಾರದಪುಡಿಯನ್ನು ಎರಚಿದ್ದರು. ತಾಯಿಯ ಕೃತ್ಯಕ್ಕೆ ಮಗಳು ಕೈಜೋಡಿಸಿರಬಹುದೆಂಬ ಶಂಕೆ ಇದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಲ್ಲವಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಪುತ್ರಿ ಕೃತಿಯಳನ್ನು ನಿಮ್ಹಾನ್ಸ್ ಕಳುಹಿಸಲಾಗಿದೆ.
ಕೊಲೆ ಹೇಗಾಯಿತು?:
ಓಂಪ್ರಕಾಶ್ ಒಂದಷ್ಟು ದಿನ ಬೇರೆ ಕಡೆ ಇದ್ದರು. ನಂತರ ಬಲವಂತವಾಗಿ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಮನೆಗೆ ಕರೆದುಕೊಂಡು ಬಂದ ನಂತರವೂ ಗಲಾಟೆ ನಡೆದಿತ್ತು. ಗಲಾಟೆ ಜೋರಾದ ಕಾರಣ ಓಂಪ್ರಕಾಶ್ ಅವರು ಸಹೋದರಿ ಸರಿತಾ ಮನೆಗೆ ಹೋಗಿದ್ದರು. ಶುಕ್ರವಾರ ಪುತ್ರಿ ಕೃತಿ ಸರಿತಾ ಅವರ ಮನೆಗೆ ಹೋಗಿ ಪೀಡಿಸಿ ಕರೆ ತಂದಿದ್ದಳು.
ಜಗಳ ವಿಕೋಪಕ್ಕೆ ಹೋದಾಗ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಮೇಲಿನ ಮಹಡಿಯ ಕೋಣೆಗಳಿಗೆ ಹೋಗಿದ್ದ ತಾಯಿ, ಮಗಳು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಪೊಲೀಸರು ಮೊದಲು ಕೊಲೆಯಾದ ಜಾಗಕ್ಕೆ ಬಂದಾಗ ಕೃತಿ ರಂಪಾಟ ಮಾಡಿದ್ದಾಳೆ. ಪೊಲೀಸರು ಬಂದಾಗ ಬಾಗಿಲು ತೆಗೆಯದೇ ಲಾಕ್ ಮಾಡಿದ್ದಳು. ಕೊಲೆ ಮಾಡಿದವರು ಯಾರು ಎಂದು ಪ್ರಶ್ನೆ ಮಾಡಿದಾಗ ಪತ್ನಿ ಪಲ್ಲವಿ ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಮನೆಯ ಮೇಲಿದ್ದ ಕೃತಿ ಹೊರಗಡೆ ಬಾರದೇ ಇದ್ದಾಗ ಪೊಲೀಸರು ಬಾಗಿಲು ಒಡೆದು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಕ್ರೈಂ ಸೀನ್ ಪರಿಶೀಲನೆ ವೇಳೆ ಊಟದ ತಟ್ಟೆ ಟೇಬಲ್ ಮೇಲೆ ಪತ್ತೆಯಾಗಿದ್ದು ಡೈನಿಂಗ್ ಹಾಲ್‌ನಲ್ಲಿ ರಕ್ತಸಿಕ್ತವಾಗಿ ಓಂಪ್ರಕಾಶ್ ಅವರ ಶವ ಪತ್ತೆಯಾಗಿದೆ. ಖಾರದಪುಡಿ ಎರಚಿ ಕೊಲೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ. ಕೇವಲ ಚಾಕು ಅಷ್ಟೇ ಅಲ್ಲದೇ ಬಿಯರ್ ಬಾಟಲ್‌ನಿಂದ ಚುಚ್ಚಿರುವ ಸಾಧ್ಯತೆಯಿದೆ. ಯಾಕೆಂದರೆ ಓಂಪ್ರಕಾಶ್ ಮೃತದೇಹದ ಪಕ್ಕದಲಲ್ಲೇ ಒಡೆದ ಬಿಯರ್ ಬಾಟಲ್ ಕೂಡ ಪತ್ತೆಯಾಗಿದೆ.